ಬಾರೀ ಮಳೆ: ನಾಳೆ ಮತ್ತೆ ಬೆಂಗಳೂರು ಶಾಲೆಗಳಿಗೆ ರಜೆ
ಬೆಂಗಳೂರು: ಮಳೆರಾಯ ಅದ್ಯಾಕೋ ಏನೋ ಬಿಡುವನ್ನೇ ಕೊಡದಂತೆ ಸುರಿಯುತ್ತಿದ್ದಾನೆ. ಅತ್ತ ಬೆಳೆಯನ್ನ ಕೊಯ್ಲು ಮಾಡುವ ಸಮಯ ಅದು ಆಗ್ತಿಲ್ಲ. ಇತ್ತ ಗಿಡಗಳಿಗೆ ಔಷಧಿ ಹೊಡೆಯುವ ಸಮಯ. ಅದಕ್ಕೂ ಸಮಯ ಸಾಕಾಗುತ್ತಿಲ್ಲ. ಆದರೆ ಮಳೆರಾಯ ಮಾತ್ರ ಹೊರಗಡೆ ಹೋಗುವುದಕ್ಕೂ ಸಾಧ್ಯವಾಗದಂತೆ ಧೋ ಎಂದು ಸುರಿಯುತ್ತಲೇ ಇದ್ದಾನೆ. ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಒಬ್ಬೊಬ್ಬರಿಗೆ ಒಂದೊಂದು ಸಂಕಟ. ಕೆಲಸಕ್ಕೆ ಹೋಗುವವರ ಪಾಡು ಒಂಥರ ಆದ್ರೆ ಮನೆಯಲ್ಲಿಯೇ ಇರುವ, ಅದರಲ್ಲೂ ಗ್ರಾಮೀಣ ಭಾಗದಲ್ಲಿರುವವರಿಗಂತು ಹೊರಗೂ ಹೋಗದ, ಕೂಲಿಗೂ ಹೋಗಲಾರದ ಸ್ಥಿತಿ.
ಬೆಂಗಳೂರಂತು ಕೆಲವು ನಗರಗಳು ಅಕ್ಷರಶಃ ಸಮುದ್ರವಾಗಿದೆ. ಜನರಂತೂ ನೀರಿನಲ್ಲಿಯೇ ನೆನೆದುಕೊಂಡೆ ಓಡಾಡುತ್ತಿದ್ದಾರೆ. ಆಟೋಗಳು ನೀರಿನಲ್ಲಿ ಓಡಿಸಲಾಗದೆ ಕೆಟ್ಟು ನಿಲ್ಲುತ್ತಿವೆ. ಶಾಲಾ ಕಾಲೇಜಿಗೆ ಹೋಗುವ ಮಕ್ಕಳ ಪಾಡಂತು ಕೇಳುವಂತೆಯೇ ಇಲ್ಲ. ಮಂಡಿಯುದ್ಧ ನೀರಿನಲ್ಲಿ, ನೆನೆದ ಬಟ್ಟೆಯಲ್ಲೇ ಶಾಲಾ-ಕಾಲೇಜಿಗೆ ಹೋಗಬೇಕು. ಹೀಗಾಗಿ ನಾಳೆಯೂ ಮಳೆ ಹೆಚ್ಚಾಗಿ ಬರುವ ಸಾಧ್ಯತೆ ಇರುವ ಕಾರಣ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಅಂಗನವಾಡಿ, ಅನುದಾನಿ ಶಾಲಾ-ಕಾಲೇಜು, ಸರ್ಕಾರಿ, ಖಾಸಗಿ ಎಲ್ಲಾ ಶಾಲಾ-ಕಾಲೇಜುಗಳಿಗೂ ರಜೆ ಘೋಷಣೆ ಮಾಡಿ, ಜಿಲ್ಲಾಧಿಕಾರಿ ಜಗದೀಶ್ ಆದೇಶ ಹೊರಡಿಸಿದ್ದಾರೆ. ಪದವಿ, ಡಿಪ್ಲೋಮಾ ಕಾಲೇಜುಗಳಿಗೆ ಯಾವುದೇ ರೀತಿಯ ರಜೆ ಇರುವುದಿಲ್ಲ. ಹಾಗೇ ಕಾಲೇಜು ಕಟ್ಟಡಗಳು ದುರಸ್ತಿಯಲ್ಲಿದ್ದರೆ ಅಂತಹ ಕಟ್ಟಡಗಳನ್ನು ಯಾವುದೇ ಕಾರಣಕ್ಕೂ ಪಾಠ ಮಾಡಲು ಬಳಸುವಂತಿಲ್ಲ. ವಿದ್ಯಾರ್ಥಿಗಳ ಸುರಕ್ಷತೆಯ ಕಡೆಗೆ ಕಾಲೇಜು ಮಂಡಳಿ ಗಮನ ಹರಿಸಬೇಕೆಂದು ಜಿಲ್ಲಾಧಿಕಾರಿ ಜಗದೀಶ್ ಅವರು ತಮ್ಮ ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಹೊರಗಡೆ ಹೋಗುವಾಗ ಜನರು ಕೂಡ ತಮ್ಮ ಬಗ್ಗೆ ಕಾಳಜಿ ವಹಿಸಬೇಕಾಗಿದೆ.