ಶಿವಮೊಗ್ಗದಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕನ ಮನೆ ಮೇಲೆ ದಾಳಿ : ಲಕ್ಷ ಲಕ್ಷ ಚಿನ್ನ ವಶಕ್ಕೆ
ಶಿವಮೊಗ್ಗ: ರಾಜ್ಯಾದ್ಯಂತ ಇಂದು ಬೆಳಗ್ಗೆಯಿಂದ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸುವುದಕ್ಕೆ ಮುಂದಾಗಿದ್ದಾರೆ. ಹಲವೆಡೆ ದಾಳಿ ನಡೆಸಿ, ಸಾಕಷ್ಟು ಚಿನ್ನಾಭರಣಗಳನ್ನು ವಶಕ್ಕೆ ಪಡೆದಿದ್ದಾರೆ. ಹನ್ನೆರಡು ಅಧಿಕಾರಿಗಳಿಗೆ ಸಂಬಂಧಪಟ್ಟಂತ ಅಧಿಕಾರಿಗಳ ಮನೆ ಮೇಲೆ ದಾಳಿ ಮಾಡಿದ್ದಾರೆ.
ಕಾನೂನು ಮಾಪನ ಅಧಿಕಾರಿ ಅಖ್ತರ್ ಅಲಿ ಅವರ ಮನೆಯಲ್ಲಿ ದಾಳಿ ನಡೆಸಿದಾಗ 25 ಲಕ್ಷ ಹಣ ಒಂದು ರೂಮಿನಲ್ಲಿ ಸಿಕ್ಕಿದೆ. ಮನೆಯಲ್ಲಿದ್ದ ಎರಡು ಕೆಜಿ ಚಿನ್ನವನ್ನು ಮನೆಯವರೇ ಬಟ್ಟೆಯಿಂದ ಕಟ್ಟಿ ಹೊರಗೆ ಎಸೆದಿದ್ದರು. ಅದನ್ನು ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಶಿವಮೊಗ್ಗದಲ್ಲಿ ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರಾಗಿರುವ ಪ್ರಕಾಶ್ ಅವರ ಕೃಷಿ ನಗರದಲ್ಲಿರುವ ನಿವಾಸದಲ್ಲಿ ಈ ದಾಳಿ ನಡೆದಿದೆ. ಈ ವೇಳೆ ಒಂದು ಕೆಜಿ ಚಿನ್ನಾಭರಣ, ಮೂರು ಕೆಜಿ ಬೆಳ್ಳಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಿಶೀಲನೆ ವೇಳೆ ಕಂತೆ ಕಂತೆ ಹಣ ಪತ್ತೆಯಾಗಿದ್ದು, ಅದರಲ್ಲಿ ಲಕ್ಷಾಂತರ ರೂಪಾಯಿ ಇದೆ ಎನ್ನಲಾಗಿದೆ. ಅಕ್ಕಸಾಲಿಗರನ್ನು ಕರೆಸಿ, ಚಿನ್ನಾಭರಣವನ್ನು ತೂಕ ಮಾಡಿಸಿದ್ದಾರೆ. ಈ ಎಲ್ಲವನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಎಫ್ಡಿಎ ಅಧಿಕಾರಿ ಮಂಜುನಾಥ್ ಮನೆಯಲ್ಲೂ ದಾಳಿ ನಡೆಸಿದ್ದು, 60 ಲಕ್ಷಕ್ಕೂ ಹೆಚ್ಚು ಚಿನ್ನಾಭರಣ ಪತ್ತೆಯಾಗಿದ್ದು, 9 ಕೆಜಿಯಷ್ಟು ಬೆಳ್ಳಿಯ ಆಭರಣ ಸಿಕ್ಕಿದೆ. ನಾಲ್ಕು ಲಕ್ಷ ನಗದು ಕೂಡ ಸಿಕ್ಕಿದೆ. ಇನ್ನು ಯಾದಗಿರಿ, ಮೈಸೂರು, ತುಮಕೂರಿನ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಐಷರಾಮಿ ವಾಚ್ ಗಳು, ಚಿನ್ನಾಭರಣ, ಬೆಳ್ಳಿ, ನಗದು ಸೇರಿದಂತೆ ಎಲ್ಲವು ದುಬಾರಿ ವಸ್ತುಗಳೇ ಸಿಕ್ಕಿವೆ. ಎಲ್ಲವನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.