ಲೋಕಸಭಾ ಚುನಾವಣೆಯಲ್ಲಿ ತುಮಕೂರಿನಿಂದ ರಾಹುಲ್ ಗಾಂಧಿ ಸ್ಪರ್ಧೆ : ಜಿ ಪರಮೇಶ್ವರ್ ಏನಂದ್ರು..?
ಲೋಕಸಭಾ ಚುನಾವಣೆಗೆ ಈಗಾಗಲೇ ಎಲ್ಲಾ ಪಕ್ಷಗಳು ಸಿದ್ಧತೆ ನಡೆಸುತ್ತಿದೆ. ಟಿಕೆಟ್ ಆಕಾಂಕ್ಷಿಗಳು ಕೂಡ ದಿನೇ ದಿನೇ ಜಾಸ್ತಿಯಾಗುತ್ತಿದ್ದಾರೆ. ಇದರ ನಡುವೆ ರಾಹುಲ್ ಗಾಂಧಿ ಅವರು ತುಮಕೂರಿನಿಂದ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಬರೀ ರಾಹುಲ್ ಗಾಂಧಿ ಮಾತ್ರವಲ್ಲ, ಪ್ರಿಯಾಂಕ ಗಾಂಧಿ, ಸೋನಿಯಾ ಗಾಂಧಿ ಹೆಸರು ಕೂಡ ಕೇಳಿ ಬಂದಿತ್ತು. ಇದೀಗ ರಾಹುಲ್ ಗಾಂಧಿ ಅವರ ಹೆಸರು ಮುನ್ನೆಲೆಗೆ ಬಂದಿದೆ. ಈ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.
ʻಈ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಟಿಬಿ ಜಯಚಂದ್ರ ಅವರು ಹಿರಿಯ ನಾಯಕರು. ದೆಹಲಿ ವಿಶೇಷ ಪ್ರತಿನಿಧಿ. ಹೀಗಾಗಿ ಅವರಿಗೆ ಈ ಬಗ್ಗೆ ಮಾಹಿತಿ ಇರಬಹುದು. ರಾಹುಲ್ ಗಾಂಧಿ ಅವರು ಕ್ಷೇತ್ರಕ್ಕೆ ಬಂದರೆ ನಮ್ಮ ಸಹಮತ ಇದ್ದೆ ಇರುತ್ತದೆ. ನಾವ್ಯಾರು ಅವರನ್ನು ಆಹ್ವಾನಿಸುವ ಅಗತ್ಯವಿಲ್ಲ. ಅವರು ಬಯಸಿದರೆ ನಾವೂ ಬೇಡ ಅನ್ನುತ್ತೀವಾ..?.
ಮೀಸಲು ಕ್ಷೇತ್ರವನ್ನು ಬಿಟ್ಟು ಬೇರೆ ಎಲ್ಲಾ ಕ್ಷೇತ್ರದಲ್ಲೂ ರಾಹುಲ್ ಗಾಂಧಿ ಸ್ಪರ್ಧೆ ಮಾಡಬಹುದು ಎಂದು ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹೇಗಾದರೂ ಮಾಡಿ ಬಿಜೆಪಿಯನ್ನು ಸೋಲಿಸಬೇಕು ಅಂತ ಕಾಂಗ್ರೆಸ್ ಜೊತೆಗೆ ವಿಪಕ್ಷಗಳು ಕೂಡ ಕೈಜೋಡಿಸಿದ್ದಾರೆ. ಹೀಗಾಗಿ ಭರ್ಜರಿ ತಯಾರಿ ಕೂಡ ನಡೆಯುತ್ತಿದೆ. ಇನ್ನು ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಯಾತ್ರೆಯಿಂದ ಕರ್ನಾಟಕದಾದ್ಯಂತ ಮನೆ ಮಾತಾಗಿದ್ದಾರೆ. ಹೀಗಾಗಿ ಇಲ್ಲಿಯೇ ಸ್ಪರ್ಧೆ ಮಾಡಿದರೆ ಗೆಲುವು ಸಿಗಬಹುದು ಎಂಬ ನಿರೀಕ್ಷೆಯಿಂದ ರಾಹುಲ್ ಗಾಂಧಿಯವರ ಸ್ಪರ್ಧೆ ಬಯಸುತ್ತಿದ್ದಾರೆ.