ಭ್ರೂಣ ಹತ್ಯೆ ಪ್ರಕರಣ ಎಸ್ಐಟಿಗೆ ನೀಡಲು ಆರ್ ಅಶೋಕ್ ಒತ್ತಾಯ..!
ಬೆಳಗಾವಿ: ಭ್ರೂಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈಗಲೂ ಸಾಕಷ್ಟು ಭ್ರೂಣ ಹತ್ಯೆ ಕೇಸ್ ಗಳು ಸಹ ಬೆಳಕಿಗೆ ಬಂದಿದೆ. ಭ್ರೂಣ ಹತ್ಯೆ ಕೇಸ್ ಇಂದು ಸದನದಲ್ಲೂ ಬಾರೀ ಚರ್ಚೆಗೆ ಬಂದಿದೆ. ವಿಪಕ್ಷ ನಾಯಕ ಆರ್ ಅಶೋಕ್ ಈ ವಿಚಾರವಾಗಿ ಮಾತನಾಡಿದ್ದಾರೆ. ಎಸ್ಐಟಿ ತನಿಖೆಗೆ ನೀಡಲು ಆಗ್ರಹಿಸಿದ್ದಾರೆ.
ಭ್ರೂಣ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಒಬ್ಬೊಬ್ಬ ವೈದ್ಯರಿಂದ 300 ಭ್ರೂಣ ಹತ್ಯೆ ನಡೆದಿದೆ. 27 ವರ್ಷಗಳಲ್ಲಿ ಆರೋಗ್ಯ ಇಲಾಖೆಯಲ್ಲಿ ದಾಖಲಾಗಿರುವುದು ಕೇವಲ 87 ಪ್ರಕರಣ. ಇದೊಂದು ರೀತಿಯಲ್ಲಿ ಕೊಲೆಯೇ ಸರಿ. ಹೀಗಾಗಿ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಎಸ್ಐಟಿ ತನಿಖೆಗೆ ನೀಡಬೇಕು. ಗಂಡು ಮಗು ಬೇಕು ಎಂಬ ಆಸೆಯಿಂದ ಭ್ರೂಣ ಹತ್ಯೆ ಮಾಡಿಸಲಾಗುತ್ತಿದೆ. ವರದಕ್ಷಿಣೆ ಕೂಡ ಇದಕ್ಕೆ ಕಾರಣವಾಗಿದೆ. ಭ್ರೂಣ ಹತ್ಯೆ ವಿಚಾರ ಬಗ್ಗೆ ಇಷ್ಟೆಲ್ಲಾ ಚರ್ಚೆಯಾದರೂ ಹೊಸಕೋಟೆಯಲ್ಲಿ 16 ವಾರಗಳ ಭ್ರೂಣ ಹತ್ಯೆ ಮಾಡಲಾಗಿದೆ.
ಕಾನೂನಿಗೆ ಎಷ್ಟು ಗೌರವ ಕೊಡುತ್ತಾರೆ, ಎಷ್ಟು ಬಲಾಢ್ಯರಿದ್ದಾರೆ ಎಂದು ಅರ್ಥವಾಗುತ್ತದೆ. ಎಲ್ಲ ರಂಗದಲ್ಲೂ ಹೆಣ್ಣು ಗುರುತಿಸಿಕೊಂಡಿರುವ ಈ ಕಾಲದಲ್ಲಿ ಭ್ರೂಣ ಹತ್ಯೆ ತಲೆ ತಗ್ಗಿಸುವ ಘಟನೆ. ಎರಡ್ಮೂರು ಜಿಲ್ಲೆಯಲ್ಲಿ ಇದು ಕಂಡಿದೆ. ನನ್ನ ಪ್ರಕಾರ ಇಡೀ ರಾಜ್ಯದಲ್ಲಿ ಇದೆ. ಗರ್ಭಿಣಿ ತಾಯಿಗೆ ತೀರ್ಮಾನದ ಅಧಿಕಾರ ಇರಲ್ಲ, ಬದಲಾಗಿ ಕುಟುಂಬ ಮಾಡುತ್ತಿದೆ. ಮನೆ ಹಾಳು ಕೆಲಸ ಮಾಡುವ ಆಸ್ಪತ್ರೆಗೆ ನಮ್ಮ ‘ಮನೆ ಕ್ಲಿನಿಕ್’ ಎಂದು ಹೆಸರು ಇಡಲಾಗಿದೆ. ಇವರೆಲ್ಲರದ್ದು ಒಂದು ದೊಡ್ಡ ಗ್ಯಾಂಗ್ ಇದೆ. ಮನೆಯ ಸದಸ್ಯರ ಕಿರಕುಳ ಕೂಡ ಭ್ರೂಣ ಹತ್ಯೆಗೆ ಕಾರಣವಾಗುತ್ತಿದೆ. ಇಂತಹ ಘಟನೆಗಳನ್ನು ಹುಡುಕುವ ಏಜೆಂಟರು ಇದ್ದಾರೆ. ಈ ಕೃತ್ಯದಲ್ಲಿ ವೈದ್ಯರೂ ಸೇರಿರುವುದು ಖೇದಕರ, ಅವರಿಗೆ ನಾಚಿಕೆ ಆಗಬೇಕು ಎಂದು ಕಿಡಿಕಾರಿದ್ದಾರೆ.