ಸಾರ್ವಜನಿಕರೇ ಎಚ್ಚರ | ರಾಜ್ಯದಲ್ಲಿ ಸದ್ದಿಲ್ಲದೇ ಶುರುವಾಗಿದೆ ಕೊರಿಯರ್ ಫ್ರಾಡ್ : ಎರಡು ರೂಪಾಯಿ ಕೇಳಿದರೆ ಕೊಡಲೇ ಬೇಡಿ, ಹೇಗೆ ನಡೆಯುತ್ತೆ ಗೊತ್ತಾ ಆನ್ ಲೈನ್ ವಂಚನೆ ?
ಸುದ್ದಿಒನ್, ಬೆಂಗಳೂರು : ಈ ವಂಚನೆಕೋರರು ದಿನೇ ದಿನೇ ಒಂದೊಂದು ಹೊಸ ದಾರಿಯನ್ನು ಹುಡುಕುತ್ತಲೇ ಇರುತ್ತಾರೆ. ಒಂದು ಮಾರ್ಗದಲ್ಲಿ ಹಣ ಲಪಾಟಾಯಿಸಿ, ಅದನ್ನು ಪೊಲೀಸರು ಕಂಟ್ರೋಲ್ ಮಾಡುವ ವೇಳೆಗೆ ಇನ್ನೊಂದು ಹೊಸ ಮಾರ್ಗವನ್ನು ಕಂಡುಕೊಳ್ಳುತ್ತಾರೆ. ಈಗ ಹೊಸದಾಗಿ ಹುಡುಕಿರುವ ಮಾರ್ಗವೇ ಕೊರಿಯರ್ ಫ್ರಾಡ್.
ರಾಜ್ಯದಲ್ಲಿ ಕೊರಿಯರ್ ಫ್ರಾಡ್ ಹೆಚ್ಚಾಗಿ, ಸೈಬರ್ ಪೊಲೀಸ್ ಠಾಣೆಗೆ 750ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಅದು ಒಂದೇ ತಿಂಗಳ ಅಂತರದಲ್ಲಿ. ಕೇವಲ 2 ರೂಪಾಯಿ ಕಳುಹಿಸಿ ಎಂದು ಕೇಳುವ ಖದೀಮರು, ಅಕೌಂಟ್ ನಲ್ಲಿರುವ ಹಣವನ್ನೇ ಖಾಲಿ ಮಾಡಿ ಬಿಡುತ್ತಾರೆ. ಹೀಗಾಗಿ ಎಚ್ಚರವಾಗಿರಿ.
ಈ ಮೋಸದ ಜಾಲ ಹೇಗೆ ಕೆಲಸ ಮಾಡುತ್ತಿದೆ ? ಮೊಬೈಲ್ ಗೆ ಕಾಲ್ ಮಾಡುವ ಖದೀಮರು, ನಾವೂ ಕೊರಿಯರ್ ಆಫೀಸಿನಿಂದ, ನಿಮಗೆ ಒಂದು ಪಾರ್ಸಲ್ ಬಂದಿದೆ. ಅಡ್ರೆಸ್ ನೀಡಿ. ಯಾವುದೇ ಡೆಲಿವರಿ ಚಾರ್ಜ್ ಇರುವುದಿಲ್ಲ. ಆದರೆ ಒಂದು ಲಿಂಕ್ ಅನ್ನು ಕಳುಹಿಸುತ್ತೇವೆ. ಅದಕ್ಕೆ ಎರಡು ರೂಪಾಯಿ ಪಾವತಿಸಿ ಎಂದು ಹೇಳುತ್ತಾರೆ. ಲೆಕ್ಕದಲ್ಲಿ ಕೇವಲ ಎರಡು ರೂಪಾಯಿ ಅಲ್ವಾ ಎಂದು ಆ ಲಿಂಕ್ ಓಪನ್ ಮಾಡಿ, ಏನಾದರೂ ಹಣ ಕಳುಹಿಸಿದರೆ ಮುಗೀತು. ತಕ್ಷಣವೇ ನಿಮ್ಮ ಅಕೌಂಟ್ ನಲ್ಲಿರುವ ಹಣ ಕಿರಾತಕರ ಅಕೌಂಟ್ ನಲ್ಲಿರುತ್ತದೆ.
ಈ ರೀತಿಯ ಪ್ರಕರಣಗಳು ನಗರದಲ್ಲಿ ಹೆಚ್ಚಾಗುತ್ತಿದೆ. ಪ್ರತಿ ದಿನ ಸೈಬರ್ ಠಾಣೆಗೆ ಬಂದು ದೂರು ನೀಡುತ್ತಿದ್ದಾರೆ. ಅದರಲ್ಲಿ ವಿದ್ಯಾವಂತರು, ಟೆಕ್ಕಿಗಳೇ ಹೆಚ್ಚಾಗಿದ್ದಾರೆ. ಹೀಗಾಗಿ ಸೈಬರ್ ಕಿರಾತಕರ ವಿಚಾರದಲ್ಲಿ ಎಚ್ಚರವಾಗಿರುವಂತೆ ಸೈಬರ್ ಕ್ರೈಂ ಪೊಲೀಸರು ಕೂಡ ತಿಳಿಸಿದ್ದಾರೆ.