ಬಗರ್ ಹುಕುಂ ರೈತರಿಗೆ ಭೂಮಿ, ವಸತಿ ನೀಡುವಂತೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಪ್ರತಿಭಟನೆ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್, ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜುಲೈ. 15 : ಬಗರ್ ಹುಕುಂ ರೈತರಿಗೆ ಭೂಮಿ, ವಸತಿ ರಹಿತರಿಗೆ ವಸತಿ ಒದಗಿಸುವಂತೆ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯಲ್ಲಿ ಲಕ್ಷಾಂತರ ರೈತರು ಬಗರ್‍ಹುಕುಂ ಸಾಗುವಳಿ ಮಾಡುತ್ತಿದ್ದು, ಅರಣ್ಯ, ಗೋಮಾಳ, ಹುಲ್ಲುಬನ್ನಿ, ಸೇಂದಿ ವನ ಇನ್ನಿತರೆ ಭೂಮಿಗಳಲ್ಲಿ ಜೀವನೋಪಾಯಕ್ಕಾಗಿ ಉಳುಮೆ ಮಾಡುತ್ತ ಭೂಮಿಯ ಹಕ್ಕಿಗಾಗಿ ಅರ್ಜಿ ಸಲ್ಲಿಸಿ ಕಾಯುತ್ತಿದ್ದಾರೆ. ಶಾಸಕರ ಅಧ್ಯಕ್ಷತೆಯಲ್ಲಿ ಭೂ ಮಂಜೂರಾತಿ ಸಮಿತಿಗಳು ರಚನೆಯಾಗಿದ್ದರೂ ಕಾಲ ಕಾಲಕ್ಕೆ ಸಭೆ ನಡೆಯುತ್ತಿಲ್ಲ. ಹಾಗಾಗಿ ಅಧಿಕಾರಿಗಳು ಹೋರಾಟ ಸಮಿತಿಯ ಮುಖಂಡರುಗಳನ್ನೊಳಗೊಂಡಂತೆ ಜಿಲ್ಲಾ ಮಟ್ಟದ ಸಭೆ ನಡೆಸಿ ಭೂಮಿಗೆ ಸಂಬಂಧಿಸಿದ ಗೊಂದಲ ಪರಿಹರಿಸಬೇಕೆಂದು ಪ್ರತಿಭಟನಾನಿರತರು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದರು.
ಭೂಮಿ ಸಾಗುವಳಿ ಮಾಡುತ್ತಿರುವವರು ಸಲ್ಲಿಸಿರುವ ಅರ್ಜಿಗಳನ್ನು ತಿರಸ್ಕರಿಸದೆ ಬಡವರಿಗೆ ನ್ಯಾಯ ನೀಡುವ ನಿಟ್ಟಿನಲ್ಲಿ ಪಾರದರ್ಶಕವಾಗಿ ತೀರ್ಮಾನವಾಗಬೇಕು. ಅರಣ್ಯ ಭೂಮಿ ಕಂದಾಯ ಭೂಮಿಯ ಗೊಂದಲಗಳಿದ್ದು, ಜಂಟಿ ಸರ್ವೆ ಮೂಲಕ ಸರಿಪಡಿಸಿ ಯಾರನ್ನು ಒಕ್ಕಲೆಬ್ಬಿಸಬಾರದು.
ನಗರ ಮಿತಿಯ ನೆಪದಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಭೂಮಿ ಮಂಜೂರಾತಿ ನೀಡದೆ ವಂಚಿಸಲಾಗುತ್ತಿದೆ. ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಒನ್ ಟೈಮ್ ಸೆಟ್ಲ್‍ಮೆಂಟ್ ಜಾರಿಗೊಳಿಸಿ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು. 94 ಸಿ ಮತ್ತು 94 ಸಿಸಿ. ಅಡಿಯಲ್ಲಿ ವಸತಿಗಾಗಿ ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಭೂಮಿ ಸಾಗುವಳಿ ಮಾಡುತ್ತ ಫಾರಂ ನಂ.50, 53, 57 ರಲ್ಲಿ ಅರ್ಜಿ ಸಲ್ಲಿಸಿರುವವರಿಗೆ ಭೂಮಿ ಮಂಜೂರಾತಿ ಕೊಡಬೇಕೆಂದು ಆಗ್ರಹಿಸಿದರು.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಸತ್ಯಪ್ಪ ಮಲ್ಲಾಪುರ, ಸದಸ್ಯ ಕುಮಾರ್ ಸಮತಳ, ಕಾರ್ಯದರ್ಶಿ ಹನುಮಂತಣ್ಣ, ಈರಜ್ಜ, ಕರಿಯಣ್ಣ, ಸುನಂದಮ್ಮ, ವೆಂಕಟೇಶ್, ನಾಗಣ್ಣ, ಚಂದ್ರಣ್ಣ, ಪುರುಷೋತ್ತಮ್, ವಿಜಯಮ್ಮ, ಕೆ.ಬಿ.ನಾಗರಾಜ್, ರಾಮಚಂದ್ರಪ್ಪ, ಕೆಂಚಪ್ಪ, ರಮೇಶಪ್ಪ, ನೆಲ್ಲಿಕಟ್ಟೆ ಗೌರಮ್ಮ, ಎಂ.ಟಿ.ರಂಗನಾಥ್, ತಿಮ್ಮಣ್ಣ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರಾಮಚಂದ್ರಪ್ಪ ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.