ನಾಳೆ ಪ್ರಧಾನ ಮಂತ್ರಿ ಮೋದಿಯವರ ಪ್ರಮಾಣ ವಚನ ಸ್ವೀಕಾರ : ಯಾರೆಲ್ಲಾ ಭಾಗವಹಿಸಲಿದ್ದಾರೆ ಗೊತ್ತಾ ?
ಸುದ್ದಿಒನ್, ನವದೆಹಲಿ,ಜೂ.08 : ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ನಂತರ ನರೇಂದ್ರ ಮೋದಿ ಅವರು ಸತತ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಜೂನ್ 9 ರ ಭಾನುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ದಕ್ಷಿಣ ಏಷ್ಯಾದ ರಾಷ್ಟ್ರಗಳ ಮುಖ್ಯಸ್ಥರು ಉಪಸ್ಥಿತರಿರುವರು. ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಮತ್ತು ಶ್ರೀಲಂಕಾ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರು ಭಾನುವಾರ ನಡೆಯಲಿರುವ ಐತಿಹಾಸಿಕ ಸಮಾರಂಭದಲ್ಲಿ ಪಾಲ್ಗೊಳ್ಳುವುದಾಗಿ ಈಗಾಗಲೇ ಘೋಷಿಸಿದ್ದಾರೆ. ನೇಪಾಳದ ಪ್ರಧಾನಿ ಪುಷ್ಪ ಕಮಲ್ ದಹಾಲ್, ಭೂತಾನ್ ಮತ್ತು ಮಾರಿಷಸ್ ಪ್ರಧಾನಿ ಅವರಿಗೆ ಈಗಾಗಲೇ ಆಹ್ವಾನಿಸಲಾಗಿದೆ.
ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಮುಖ ಉದ್ಯಮಿಗಳು, ಚಿತ್ರರಂಗದ ಗಣ್ಯರು, ರಾಜಕೀಯ ಮುಖಂಡರು ಮತ್ತು ಇತರ ಕೆಲವು ಗಣ್ಯ ಅತಿಥಿಗಳು ಭಾಗವಹಿಸಲಿದ್ದಾರೆ. ನೈರ್ಮಲ್ಯ ಸಿಬ್ಬಂದಿ, ತೃತೀಯಲಿಂಗಿಗಳು, ಸೆಂಟ್ರಲ್ ವಿಸ್ಟಾ ನಿರ್ಮಾಣದಲ್ಲಿ ತೊಡಗಿರುವ ಕಾರ್ಮಿಕರನ್ನು ವಿಶೇಷ ಆಹ್ವಾನಿತರನ್ನಾಗಿ ಕರೆಯಲಾಗುವುದು. ಅದೇ ರೀತಿ ವಿಕಾಸ್ ಭಾರತ್ ರಾಯಭಾರಿಗಳು, ಸರ್ಕಾರಿ ಯೋಜನೆಗಳ ಫಲಾನುಭವಿಗಳು ಮತ್ತು ವಂದೇ ಭಾರತ್ ಮತ್ತು ಮೆಟ್ರೋ ರೈಲುಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಯನ್ನು ಮೋದಿ ಪದಗ್ರಹಣ ಸಮಾರಂಭಕ್ಕೆ ಆಹ್ವಾನಿಸಿದ್ದಾರೆ.
ಭಾನುವಾರ ಸಂಜೆ ನಡೆಯುವ ಈ ಕಾರ್ಯಕ್ರಮದಲ್ಲಿ ಒಟ್ಟು 8 ಸಾವಿರ ಮಂದಿ ಭಾಗವಹಿಸಲಿದ್ದಾರೆ. ಜೂನ್ 4 ರಂದು ಪ್ರಕಟವಾದ ಸಾರ್ವತ್ರಿಕ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ 240 ಸ್ಥಾನಗಳನ್ನು ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆ ಪಕ್ಷದ ನೇತೃತ್ವದ ಎಲ್ಲಾ ಸಮ್ಮಿಶ್ರ ಪಕ್ಷಗಳು ಒಟ್ಟಾಗಿ 293 ಸ್ಥಾನಗಳನ್ನು ಗೆದ್ದಿವೆ. ಈ ಮೂಲಕ ಮತ್ತೊಮ್ಮೆ ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಅಧಿಕಾರಕ್ಕೆ ಬಂದಿದೆ.