ದಸರಾ ವಿಚಾರದಲ್ಲಿ ಸರ್ಕಾರಕ್ಕೆ ಚಾಲೆಂಜ್ ಹಾಕಿದ ಪ್ರತಾಪ್ ಸಿಂಹ..!
ಮೈಸೂರು: ಸಂಭ್ರಮದ ದಸರಾ ಹಬ್ಬಕ್ಕೆ ಸಕಲ ಸಿದ್ಧತೆ ನಡೆಯುತ್ತಿದೆ. ಈ ಮಧ್ಯೆ ಮಹಿಷ ದಸರಾ ವಿಚಾರವಾಗಿ ಸಂಸದ ಪ್ರತಾಪ್ ಸಿಂಹ ಸರ್ಕಾರಕ್ಕೆ ಚಾಲೆಂಜ್ ಹಾಕಿದ್ದಾರೆ. ಮಹಿಷ ದಸರಾ ಮಾಡುವುದಕ್ಕೆ ಸರ್ಕಾರ ಅದೇಗೆ ಅವಕಾಶ ನೀಡುತ್ತದೆ ಎಂದು ನೋಡಿಯೇ ಬಿಡುತ್ತೀನಿ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಪ್ರತಾಪ್ ಸಿಂಹ, ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಮಹಿಷ ದಸರಾ ಮಾಡುವಂತೆ ಇಲ್ಲ. ಮಹಿಷ ದಸರಾ ಎಂಬ ಅಸಹ್ಯವನ್ನು, ಅಪದ್ಧವನ್ನು ಮಾಡುವುದಕ್ಕೆ ಹೊರಟಾಗ ಆತ್ಮಸಾಕ್ಷಿಗೆ ನೋವಾಗ ಬೇಕು ಅಲ್ಲವಾ..? ಯಾವುದೇ ಕಾರಣಕ್ಕೂ ಮಹಿಷ ದಸರಾ ಮಾಡುವುದಕ್ಕೆ ನಾನು ಬಿಡಲ್ಲ.
ಕಳೆದ ನಾಲ್ಕು ವರ್ಷಗಳಿಂದ ಮಹಿಷ ದಸರಾ ಮಾಡುವುದಕ್ಕೆ ಅವಕಾಶ ನೀಡಿಲ್ಲ. ಈ ಆಚರಣೆಮಾಡುವುದರ ವಿರುದ್ಧ ಮೈಸೂರಿನ ನಿವಾಸಿಗಳು ಒಗ್ಗಟ್ಟಾಗಬೇಕಾಗಿದೆ. ಮಹಿಷ ದಸರಾ ಮಾಡುತ್ತಿದ್ದ ನಾಲ್ಕು ಜನರ ಮನೆಯಲ್ಲಿ ಹೋಗಿ ನೋಡಿ, ಈಗ ಅವರ ಮನೆಯಲ್ಲೂ ತಾಯಿ ಚಾಮುಂಡೇಶ್ವರಿಯನ್ನು ಪೂಜೆ ಮಾಡುತ್ತಿದ್ದಾರೆ. ಇವರಿಗೆ ಕನಿಷ್ಠ ಪಕ್ಷ ಅವರ ಭಾವನೆಗಳನ್ನಾದರೂ ಅರ್ಥ ಮಾಡಿಕೊಳ್ಳುವ ಸೌಜನ್ಯವಿರಬೇಕು. 2019ರಲ್ಲಿ ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೂ ಮಹಿಷ ದಸರಾಗೆ ಅವಕಾಶ ನೀಡಿರಲಿಲ್ಲ. ಈ ಆಚರಣೆಯಿಂದ ಬಹುಸಂಖ್ಯಾತರ ಭಾವನೆಗಳಿಗೆ ಧಕ್ಕೆಯುಂಟಾಗುತ್ತದೆ. ಮನಸ್ಸುಗಳಿಗೆ ನೋವಾಗುತ್ತದೆ ಎಂದು ಪ್ರತಾಪ್ ಸಿಂಹ ರಾಜ್ಯ ಸರ್ಕಾರದ ಮೇಲೆ ಆಕ್ರೋಶ ಹೊರ ಹಾಕಿದ್ದಾರೆ.