ಪ್ರಜ್ವಲ್ ರೇವಣ್ಣ ಕೇಸ್: ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಇದ್ದಾಗ ಮಾಡಿಕೊಂಡ ವಿಡಿಯೋ.. ಪ್ರಜ್ವಲ್ ಗೆ ಶಿಕ್ಷೆಯಾಗಲೇಬೇಕು : ಮೋದಿ ಒತ್ತಾಯ..!
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋಗಳಿಗೆ ಸಂಬಂಧಿಸಿದಂತೆ ಈಗಾಗಲೇ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಸಂಬಂಧಪಟ್ಟವರಿಗೆ ನೋಟೀಸ್ ನೀಡಿ, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಸಂತ್ರಸ್ತೆಯರನ್ನು ಕರೆಸಿ, ಹೇಳಿಕೆಗಳನ್ನು ಪಡೆಯುತ್ತಿದ್ದಾರೆ. ಇದರ ನಡುವೆ ಪ್ರಧಾನಿ ಮೋದಿ, ಪ್ರಜ್ವಲ್ ರೇವಣ್ಣಗೆ ಶಿಕ್ಷೆಯಾಗಬೇಕು ಎಂದಿದ್ದಾರೆ.
ಈ ಬಗ್ಗೆ ಮಾತನಾಡಿರುವ ಪ್ರಧಾನಿ ಮೋದಿ, ಕಾನೂನು ಸುವ್ಯವಸ್ಥೆ ರಾಜ್ಯಗಳ ವಿಚಾರವಾಗಿದೆ. ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಗುಜರಾತ್, ತೆಲಂಗಾಣ ಯಾವ ರಾಜ್ಯವೇ ಆಗಲಿ ಕಾನೂನು ಸುವ್ಯವಸ್ಥೆ ಆಯಾ ರಾಜ್ಯಗಳದ್ದೇ ಆಗಿದೆ. ಕರ್ನಾಟಕದಲ್ಲೂ ಅಷ್ಟೇ ಆಯಾ ರಾಜ್ಯದ್ದೇ ಆಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಸರ್ಕಾರವೇ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಈ 2,979 ವಿಡಿಯೋಗಳನ್ನು ಒಂದೇ ದಿನ ಮಾಡಿಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಾದಾಗ ಮಾಡಿದೆ. ಆರೋಪಿಯ ಮೇಲೆ ರಾಜ್ಯ ಸರ್ಕಾರ ನಿಗಾ ವಹಿಸಬೇಕಿತ್ತು ಎಂದಿದ್ದಾರೆ.
ಪ್ರಜ್ವಲ್ ರೇವಣ್ಣ ಅವರನ್ನು ವಿದೇಶಕ್ಕೆ ಹೋಗಲು ಬಿಟ್ಟಿರುವುದೇ ರಾಜ್ಯ ಸರ್ಕಾರ. ಕೇಂದ್ರ ಸರ್ಕಾರದ ಗಮನಕ್ಕೆ ಈ ವಿಷಯವನ್ನು ತಂದಿಲ್ಲ. ಒಕ್ಕಲಿಗರ ಪ್ರಾಬಲ್ಯವಿರುವ ಕ್ಷೇತ್ರಗಳ ಚುನಾವಣೆ ಮುಗಿದ ಮೇಲೆ ಈ ವಿಡಿಯೋಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ರಾಜಕೀಯದಾಟ. ಇದು ಅನುಮಾನಕ್ಕೆ ಕಾರಣವಾಗಿದೆ. ಇಂಥ ಆಟಗಳನ್ನು ದೇಶದಲ್ಲಿ ನಿಲ್ಲಿಸಬೇಕು. ಪ್ರಜ್ವಲ್ ರೇವಣ್ಣರಂತ ಅತ್ಯಾಚಾರಿಗಳ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿರಬೇಕು. ಆತನಿಗೆ ಕಠಿಣಾತಿ ಕಠಿಣ ಶಿಕ್ಷೆಯಾಗಬೇಕು. ಪ್ರಜ್ಚಲ್ ರೇವಣ್ಣ ಅವರನ್ನು ವಿದೇಶದಿಂದ ವಾಪಾಸ್ ಕರೆ ತರಬೇಕು ಎಂದು ಪ್ರಧಾನಿ ಮೋದಿ ಒತ್ತಾಯಿಸಿದ್ದಾರೆ.