ನಾಳೆ ನಡೆಯಬೇಕಿದ್ದ 5, 8, 9ನೇ ತರಗತಿ ಬೋರ್ಡ್ ಎಕ್ಸಾಂ ಮುಂದೂಡಿಕೆ..!
ಬೆಂಗಳೂರು: 5, 8, 9 ನೇ ತರಗತಿ ಮಕ್ಕಳಿಗೆ ನಾಳೆ ನಡೆಯಬೇಕಿದ್ದ ಬೋರ್ಡ್ ಪರೀಕ್ಷೆಯನ್ನು ಇಲಾಖೆ ಮುಂದೂಡಿ ಆದೇಶ ಹೊರಡಿಸಿದೆ. ಬೋರ್ಡ್ ಪರೀಕ್ಷೆಗೆಂದು ತಯಾರಾಗಿದ್ದ ಮಕ್ಕಳು ಹಾಗೂ ಪೋಷಕರಿಗೆ ಆತಂಕ ಶುರುವಾಗಿದೆ. ಯಾಕಂದ್ರೆ ಪರೀಕ್ಷೆಯ ದಿನಾಂಕವನ್ನು ಮುಂದೂಡಿರುವ ಇಲಾಖೆ ಪರೀಕ್ಷೆ ಯಾವತ್ತು ನಡೆಯಬಹುದು ಎಂಬ ಮಾಹಿತಿಯನ್ನು ನೀಡಿಲ್ಲ.
ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿತ್ತು. ಆ ಹಿನ್ನೆಲೆಯಲ್ಲಿ ಪರೀಕ್ಷೆಗಳು ನಾಳೆಗೆ ನಿಗದಿತಾಗಿತ್ತು. ಇದೀಗ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಕರ್ನಾಟಕದ ಹೈಕೋರ್ಟ್ ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿರುವ ಕಾರಣ 5, 8, 9ನೇ ತರಗತಿಯ ಬೋರ್ಡ್ ಪರೀಕ್ಷೆಗಳನ್ನ ಸದ್ಯಕ್ಕೆ ನಡೆಸುವಂತಿಲ್ಲ. ಇದರಿಂದ ರಾಜ್ಯದ ಬೋರ್ಡ್ ಎಕ್ಸಾಂ ನಡೆಸುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಭಾರೀ ಹಿನ್ನಡೆಯಾಗಿದೆ.
ನ್ಯಾಯಮೂರ್ತಿ ಬೇಲಾ ತ್ರಿವೇದಿ ಹಾಗೂ ನ್ಯಾ.ಪಂಕಜ್ ಮಿತ್ತಲ್ ಅವರ ನ್ಯಾಯಪೀಠ ಹೈಕೋರ್ಟ್ ವಿಭಾಗೀಯ ಪೀಠದ ಮೇಲ್ಮನವಿ ಅರ್ಜಿಯ ಅಂತಿಮ ತೀರ್ಪು ನೀಡುವವರೆಗೂ ಬೋರ್ಡ್ ಪರೀಕ್ಷೆಗಳನ್ನ ನಡೆಸದಂತೆ ಆದೇಶ ಹೊರಡಿಸಲಾಗಿದೆ. ಆದೇಶ ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಹಾಗೂ ಅವರ್ ಸ್ಕೂಲ್ಸ್ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಅರ್ಜಿದಾರರ ಪರ ಹಿರಿಯ ವಕೀಲ ಕೆ.ವಿ.ಧನಂಜಯ್ ವಾದ ಮಂಡಿಸಿದ್ದರು. ಪರೀಕ್ಷೆ ನಡೆಸಲು ಅನುಮತಿ ನೀಡಿದ್ದ ವಿಭಾಗೀಯ ಪೀಠದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದ್ದು, ಹೈಕೋರ್ಟ್ ವಿಭಾಗೀಯ ಪೀಠ ಅರ್ಜಿಯ ಸಂಪೂರ್ಣ ವಾದ ಮಂಡಿಸಿ ತೀರ್ಪು ನೀಡುವರೆಗೂ ಬೋರ್ಡ್ ಎಕ್ಸಾಂ ನಡೆಸಬಾರದು ಎಂದು ಸೂಚಿಸಲಾಗಿದೆ.