ನಾಳೆ ಮಧ್ಯಾಹ್ನ 3 ಗಂಟೆಗೆ ಲೋಕಸಭಾ ಚುನಾವಣಾ ದಿನಾಂಕ ಘೋಷಣೆ
ಸುದ್ದಿಒನ್, ನವದೆಹಲಿ, ಮಾರ್ಚ್.15: ಕೇಂದ್ರ ಚುನಾವಣಾ ಆಯೋಗ ಸಾರ್ವತ್ರಿಕ ಚುನಾವಣಾ ವೇಳಾಪಟ್ಟಿ ಬಿಡುಗಡೆಗೆ ದಿನಾಂಕವನ್ನು ನಿಗದಿಪಡಿಸಿದ್ದು, ಶನಿವಾರ (ಮಾರ್ಚ್ 16) ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಲಿದೆ.
ಮಧ್ಯಾಹ್ನ 3 ಗಂಟೆಗೆ ಕೇಂದ್ರ ಚುನಾವಣಾ ಆಯೋಗ ಮಾಧ್ಯಮ ಸಭೆ ನಡೆಸಿ ವೇಳಾಪಟ್ಟಿ ಪ್ರಕಟಿಸಲಿದೆ. ಈ ಮಟ್ಟಿಗೆ ಇಸಿ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ತಿಳಿಸಿದೆ. ಲೋಕಸಭೆ ಜತೆಗೆ ಐದು ರಾಜ್ಯಗಳ ವಿಧಾನಸಭೆಗಳಿಗೂ ಚುನಾವಣಾ ವೇಳಾಪಟ್ಟಿ ಪ್ರಕಟವಾಗಲಿದೆ.
ಪ್ರಸಕ್ತ ಲೋಕಸಭೆಯ ಅವಧಿಯು ಜೂನ್ 16ಕ್ಕೆ ಮುಕ್ತಾಯವಾಗಲಿದೆ. ಅಲ್ಲದೆ, ಈ ವರ್ಷದ ಮೇ ವೇಳೆಗೆ ಆಂಧ್ರಪ್ರದೇಶ, ಒಡಿಶಾ, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶಗಳ ವಿಧಾನಸಭಾ ಚುನಾವಣೆಗಳು ನಡೆಯಲಿವೆ. ಈ ಉದ್ದೇಶಕ್ಕಾಗಿ, ಇಸಿ ಇತ್ತೀಚೆಗೆ ದೇಶಾದ್ಯಂತ ಅನೇಕ ರಾಜ್ಯಗಳಲ್ಲಿ ಪ್ರವಾಸ ಮಾಡಿ ಸ್ಥಳೀಯ ರಾಜಕೀಯ ಪಕ್ಷಗಳು ಮತ್ತು ಕ್ಷೇತ್ರ ಮಟ್ಟದಲ್ಲಿ ಅಧಿಕಾರಿಗಳೊಂದಿಗೆ ವಿಸ್ತೃತ ಸಭೆಗಳನ್ನು ನಡೆಸಿತ್ತು. ಬಳಿಕ ವೇಳಾಪಟ್ಟಿ ಸಿದ್ಧಪಡಿಸಲಾಗಿತ್ತು.
ಕಳೆದ ಲೋಕಸಭಾ ಚುನಾವಣೆಯ ವೇಳಾಪಟ್ಟಿಯನ್ನು ಮಾರ್ಚ್ 10, 2019 ರಂದು ಪ್ರಕಟಿಸಲಾಗಿತ್ತು. ಏಪ್ರಿಲ್ 11 ರಿಂದ ಮೇ 19 ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆದಿತ್ತು. ಮೇ 23ರಂದು ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಿತ್ತು. ಈ ಬಾರಿಯೂ ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧತೆ ನಡೆಸಿದೆ. ವೇಳಾಪಟ್ಟಿ ಪ್ರಕಟವಾದ ಕೂಡಲೇ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದೆ.