ಯಡಿಯೂರಪ್ಪ ವಿರುದ್ಧ ಪೋಕ್ಸೋ ಕೇಸ್ : ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು..?
ಬೆಂಗಳೂರು: ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ವಿರುದ್ಧ ಪೋಕ್ಸೋ ದೂರು ದಾಖಲಾಗಿದ್ದು, ರಾಜ್ಯದ ಜನತೆಗೆ ಶಾಕ್ ಆಗಿದೆ. ನಿನ್ನೆ ರಾತ್ರಿ ಮಹಿಳೆಯೊಬ್ಬರು ಸದಾಶಿವನಗರದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಗುರುವಾರ ಸಂಜೆ ಆರು ಗಂಟೆಯ ವೇಳೆಗೆ ಮಹಿಳೆ ಮತ್ತು ಮಗಳು ದೂರು ನೀಡಲು ಪೊಲೀಸ್ ಠಾಣೆಗೆ ಹೋಗಿದ್ದರು ದೂರು ತೆಗೆದುಕೊಂಡಿಲ್ಲ. ರಾತ್ರಿ 12 ಗಂಟೆಯವರೆಗೂ ಕಾಯಿಸಿ, ಬಳಿಕ ದೂರು ದಾಖಲಿಸಿಕೊಂಡಿದ್ದಾರೆ.
ಅಷ್ಟಕ್ಕೂ ಮಹಿಳೆ ಕೊಟ್ಟ ದೂರಿನಲ್ಲಿ ಏನಿದೆ..? 'ಅಪ್ರಾಪ್ತ ಮಗಳ ಮೇಲೆ ಈ ಹಿಂದೆ ಆಗಿದ್ದ ಅತ್ಯಾಚಾರ ಸಂಬಂಧ ನ್ಯಾಯ ಒದಗಿಸುವಂತೆ ಕೋರಿ , ಎಸ್ಐಟಿ ತನಿಖೆಗೆ ವಹಿಸುವಂತೆ ಮನವಿ ಮಾಡಲು 2024ರ ಫೆಬ್ರವರಿ 2 ರಂದು ಯಡಿಯೂರಪ್ಪ ಮನೆಗೆ ಸಂತ್ರಸ್ತ ಬಾಲಕಿ ಹಾಗೂ ತಾಯಿ ಹೋಗಿದ್ದರು. ಆ ವೇಳೆ 9 ನಿಮಿಷಗಳವಕಾಲ ಯಡಿಯೂರಪ್ಪ ಇವರೊಂದಿಗೆ ಮಾತನಾಡಿದ್ದರು. ಇಬ್ಬರಿಗೂ ಟೀ ಕುಡಿಸಿದರು. ಬಾಲಕಿಯು ಯಡಿಯೂರಪ್ಪರವರನ್ನು ತಾತಾ ಎಂದು ಕರೆಯುತ್ತಿದ್ದರು. ಯಡಿಯೂರಪ್ಪ ಅವರು ಕೂಡ ಬಾಲಕಿಯ ಕೈ ಹಿಡಿದುಕಿಂಡೆ ಮಾತನಾಡುತ್ತಿದ್ದರು. ಆದರೆ ಆಮೇಲೆ ರೂಮಿಗೆ ಕರೆದುಕೊಂಡು ಹೋಗಿ ಬಾಗಿಲು ಹಾಕಿಕೊಂಡರು. ಐದು ನಿಮಿಷದ ಬಳಿಕ ಮಗಳು ಓಡಿಬಂದಳು. ಹೀಗೆಕೆ ಮಾಡಿದ್ದೀರಿ ಎಂದರೆ, ರೇಪ್ ಆಗಿದೆಯಾ ಇಲ್ವಾ ಎಂದು ಚೆಕ್ ಮಾಡುತ್ತಿದ್ದೆ ಎಂದರು. ಆಮೇಲೆ ಇದನ್ನು ಯಾರ ಬಳಿಯೂ ಹೇಳಬೇಡ ಎಂದರು ಎಂದು ಕ್ಷಮೆಯಾಚಿಸಿದರು ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಮಾತನಾಡಿ, ಯಡಿಯೂರಪ್ಪ ಅವರು ಹಿರಿಯ ರಾಜಕಾರಣಿ. ಇದರಲ್ಲಿ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ನಿನ್ನೆ ರಾತ್ರಿ ಮಹಿಳೆ ದೂರು ಕೊಟ್ಟಿದ್ದಾರೆ. ಅದನ್ನು ಪರಿಗಣಿಸಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಕಾನೂನು ಪ್ರಕಾರ ಪೊಲೀಸರು ತನಿಖೆ ನಡೆಸುತ್ತಾರೆ ಎಂದಿದ್ದಾರೆ.