ಬೇಸಿಗೆಯ ರಜೆಯಲ್ಲೂ ಮೈಸೂರಿಗೆ ಬರ್ತಿಲ್ಲ ಜನ : ಕಾರಣವೇನು ಗೊತ್ತಾ..?
ಮೈಸೂರು: ಬೇಸಿಗೆ ರಜೆ ಬಂತು ಎಂದರೆ ಸಾಕು ಪೋಷಕರು ಮಕ್ಕಳನ್ನು ಕರೆದುಕೊಂಡು ಐತಿಹಾಸಿಕ ಸ್ಥಳಗಳಿಗೆ ಪ್ರವಾಸಕ್ಕೆಂದು ಹೊರಟು ಬಿಡುತ್ತಾರೆ. ಅದರಲ್ಲಿ ಮೈಸೂರು ಕೂಡ ಒಂದು. ಮಾಮೂಲಿ ದಿನದಲ್ಲಿಯೇ ಮೈಸೂರು ಅರಮನೆ ವಿಸಿಟ್ ಮಾಡುವ ಪ್ರವಾಸಿಗರ ಸಂಖ್ಯೆ 5 ಸಾವಿರ ಇರಲಿದೆ. ಆದರೆ ನಿನ್ನೆಯ ವೀಕೆಂಡ್ ನಲ್ಲಿ ಕೇವಲ 2,500 ಜನರ ದಾಖಲೆಯಾಗಿದೆ. ಈ ಮೂಲಕ ಸಾಕಷ್ಟು ಜನಸಂಖ್ಯೆ ಇಳಿಮುಖವಾಗಿದೆ.
ಇಷ್ಟೊಂದು ಇಳಿಮುಖವಾಗಿರುವುದಕ್ಕೆ ಹಲವು ಕಾರಣಗಳಿವೆ. ಬೇಸಿಗೆಯ ತಾಪ ಹೆಚ್ಚಾಗಿದೆ. ಹೀಗಾಗಿ ಹೊರಗೆ ಓಡಾಡುವುದಕ್ಕೂ ಜನ ಭಯ ಪಡುತ್ತಿದ್ದಾರೆ. ಮತ್ತೊಂದು ಕಡೆ ಲೋಕಸಭಾ ಚುನಾವಣೆ ಬೇರೆ ಬಂದಿದೆ. ಈಗಾಗಲೇ ಪ್ರಚಾರ ಕಾರ್ಯ ಶುರುವಾಗಿದೆ. ಹೆಚ್ಚಿನ ಸರ್ಕಾರಿ ನೌಕರರು ಚುನಾವಣಾ ವಿಚಾರದಲ್ಲಿ ಬ್ಯುಸಿಯಾಗಿದ್ದಾರೆ. ಚುನಾವಣಾ ಕೆಲಸಕ್ಕೆ ಸರ್ಕಾರಿ ನೌಕರರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಹೀಗಾಗಿ ಮಕ್ಕಳ ಜೊತೆಗಿನ ಪ್ರವಾಸಕ್ಕೆ ಸಮಯವೇ ಸಿಗುತ್ತಿಲ್ಲ.
ಮತ್ತೊಂದು ಕಡೆ ಈ ವರ್ಷ ಬೋರ್ಡ್ ಪರೀಕ್ಷೆಯ ಗೊಂದಲವೇ ಜಾಸ್ತಿ ಇತ್ತು. ಪೋಷಕರಿಗೆ, ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆ ನಡೆಸುತ್ತಾರಾ..? ಇಲ್ವಾ ಎಂಬ ಗೊಂದಲವೇ ಜಾಸ್ತಿ ಇತ್ತು. ಕೊನೆ ಗಳಿಗೆಯಲ್ಲಿ ಬೋರ್ಡ್ ಪರೀಕ್ಷೆಯನ್ನು ಅನೌನ್ಸ್ ಮಾಡಿದ್ದಾರೆ. ಇದು ಪೋಷಕರ ಆತಂಕಕ್ಕೆ ಕಾರಣವಾಗಿದೆ. ಮಕ್ಕಳಿಗೆ ಪ್ರಿಪೇರ್ ಮಾಡಬೇಕಾಗಿದೆ. ಸಮಯ ಕಡಿಮೆ ಇರುವುದರಿಂದ ಪ್ರವಾಸದ ಯೋಚನೆಯನ್ನು ಕೈ ಬಿಡಲಾಗಿದೆ. ಈ ಎಲ್ಲಾ ಕಾರಣಗಳಿಂದಾಗಿಯೇ ಮೈಸೂರು ಬಣಗುಡುತ್ತಿದೆ. ಪ್ರತಿ ದಿನ ತುಂಬಿ ತುಳುಕುತ್ತಿದ್ದ ಅರಮನೆ ಈಗ ಕಡಿಮೆ ಜನರಿಂದ ಕೂಡಿದೆ.. ಆದರೆ ಚಾಮುಂಡಿ ಬೆಟ್ಟಕ್ಕೆ ಮಾತ್ರ ಭಕ್ತರ ಸಂಖ್ಯೆಯಲ್ಲಿ ಕಡಿಮೆಯಾಗಿಲ್ಲ.