ಬೆಂಗಳೂರಿಗೆ ಬಂದಿದ್ದ ಪವನ್ ಕಲ್ಯಾಣ್ ಗಾಡಿಯಲ್ಲಿ ಹೆಬ್ಬಾವು ಪ್ರತ್ಯಕ್ಷ..!
ಬೆಂಗಳೂರು: ಇಂದು ಆಂಧ್ರ ಪ್ರದೇಶದ ನಟ, ಡಿಸಿಎಂ ಪವನ್ ಕಲ್ಯಾಣ್ ಕರ್ನಾಟಕಕ್ಕೆ ಬಂದಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯ ಅರಣ್ಯ ಸಚಿವ ಈಶ್ವರ ಖಂಡ್ರೆ ಅವರನ್ನು ಭೇಟಿಯಾಗಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಕುವೆಂಪು ಅವರನ್ನು ನೆನಪಿಸಿಕೊಂಡಿದ್ದಾರೆ. ಅಣ್ಣಾವ್ರ ಗಂಧದ ಗುಡಿ ಹಾಡನ್ನು ನೆನಪಿಸಿದ್ದಾರೆ. ಪವನ್ ಕಲ್ಯಾಣ್ ಅವರ ಈ ನಡೆಗೆ ಕರ್ನಾಟಕದಲ್ಲಿ ಪ್ರಶಂಸೆ ಸಿಕ್ಕಿದೆ.
ಆದರೆ ಈ ವೇಳೆ ಅವರ ಬೆಂಗಾವಲು ಪಡೆ ವಾಹನದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಒಂದು ಕ್ಷಣ ಹೆಬ್ಬಾವನ್ನು ಕಂಡವರೆಲ್ಲಾ ಗಾಬರಿಯಾಗಿದ್ದಾರೆ. ಅವರ ವಾಹನದಲ್ಲಿ ಹೆಬ್ಬಾವು ಬಂದಿದ್ದಾರೂ ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಪವನ್ ಕಲ್ಯಾಣ್ ಜೊತೆಗೆ ಬಂದಿದ್ದ ಅಧಿಕಾರಿಯ ವಾಹನದಲ್ಲಿ ಒಂದರಿಂದ ಒಂದೂವರೆ ಅಡಿ ಹೆಬ್ಬಾವು ಕಾಣಿಸಿಕೊಂಡಿದೆ. ಹೆಬ್ಬಾವು ಕಂಡೊಡನೆ ಅಲ್ಲಿಂದ ಅರಣ್ಯಾಧಿಕಾರಿಗಳು ಅದನ್ನು ಸೆರೆಹಿಡಿದಿದ್ದಾರೆ.
ಇಂದು ಒವನ್ ಕಲ್ಯಾಣ್ ಬೆಂಗಳೂರಿಗೆ ಬಂದದ್ದು ಕಾಡು ಪ್ರಾಣಿಗಳ ಕುರಿತ ವಿಚಾರದ ಬಗ್ಗೆ ಚರ್ಚಿಸಲು ಆಯೋಜಿಸಿದ್ದ ಸಭೆಯಾಗಿತ್ತು. ಕಾಡು ಪ್ರಾಣಿಗಳ ಹಾವಳಿ, ನಿಯಂತ್ರಣ ಹಾಗೂ ಆನೆ ಕಾರ್ಯಾಚರಣೆಯ ಕುರಿತ ಸಭೆ ಇದಾಗಿತ್ತು. ಸಿದ್ದರಾಮಯ್ಯ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಸಭೆ ಫಿಕ್ಸ್ ಆಗಿತ್ತು.
ಬೆಂಗಳೂರಿಗೆ ಆಗಮಿಸಿದ ಪವನ್ ಕಲ್ಯಾಣ್ ಈ ಸಭೆಯಲ್ಲಿ ಭಾಗವಹಿಸಿದ್ದರು. ಇಲ್ಲಿನ ಅರಣ್ಯ ಇಲಾಖೆ ಸಚಿವರಾಗಿರುವ ಈಶ್ವರ್ ಖಂಡ್ರೆ ಅವರು, ಪವನ್ ಕಲ್ಯಾಣ್ ಜೊತೆಗೆ ಒಂದಷ್ಟು ಯೋಜನೆಗಳ ಬಗ್ಗೆ ಚರ್ಚೆ ನಡೆಸಿದರು. ಆಮೇಲೆ ನೋಡಿದರೆ ಬೆಂಗಾವಲು ಪಡೆಯ ವಾಹನದಲ್ಲಿಯೇ ಹೆಬ್ಬಾವು ಕಾಣಿಸಿಕೊಂಡು ಎಲ್ಲರನ್ನು ದಂಗು ಪಡಿಸಿದೆ. ಸದ್ಯ ಹೆಬ್ಬಾವನ್ನು ರಕ್ಷಿಸಲಾಗಿದೆ.