ಹಾಲಿನ ದರ ಏರಿಕೆಗೆ ಆಕ್ರೋಶ : ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ಬೆಂಗಳೂರು: ಸಾಮಾನ್ಯ ಜನ ಈ ಬೆಲೆ ಏರಿಕೆಯಿಂದಾನೇ ತತ್ತರಿಸಿ ಹೋಗಿದ್ದಾರೆ. ಮೊನ್ನೆಯಷ್ಟೇ ಪೆಟ್ರೋಲ್-ಡಿಸೇಲ್ ದರ ಏರಿಕೆಯಾಗಿದೆ. ಈಗ ಹಾಲಿನ ದರವನ್ನು ಏರಿಕೆ ಮಾಡಲಾಗಿದೆ. 2 ರೂಪಾಯಿ ಏರಿಕೆ ಮಾಡಿ 50 ML ಹಾಲನ್ನು ಜಾಸ್ತಿ ನೀಡಲಾಗುತ್ತಿದೆ. ಆದರೆ ದಿಢೀರನೇ ಎರೆಉ ರೂಪಾಯಿ ಏರಿಕೆಯಾಗಿದ್ದು ಗ್ರಾಹಕರಿಗೆ ಹೆಚ್ಚುವರಿಯಾದಂತೆಯೇ ಆಗಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ಸ್ಪಷ್ಟನೆ ನೀಡಿದ್ದಾರೆ. ನಂದಿನಿ ಹಾಲಿನ ಪ್ಯಾಕೆಟ್ ನಲ್ಲಿ ಹಾಲಿನ ಪ್ರಮಾಣವನ್ನು ಹೆಚ್ಚಳ ಮಾಡಲಾಗಿದೆ. 50 ಮಿಲೀ ಹೆಚ್ಚಳ ಮಾಡಿ, ಅದಕ್ಕೆ 2 ರೂಪಾಯಿ ದರ ನಿಗದಿ ಮಾಡಲಾಗಿದೆ. ಹಾಲಿನ ಬೆಲೆಯಲ್ಲು ಯಾವುದೇ ರೀತಿಯ ಏರಿಕೆ ಮಾಡಿಲ್ಲ. ಹಾಲು ಸಂಗ್ರಹಣಾ ಕೇಂದ್ರದಲ್ಲಿ ರೈತರು ಹೆಚ್ಚುವರಿಯಾಗಿ ತರುವ ಹಾಲನ್ನು ವಾಪಾಸ್ ಕಳುಹಿಸಬಾರದು ಎಂಬ ಉದ್ದೇಶಕ್ಕೆ ಈ ರೀತಿ ಹೆಚ್ಚುವರಿ ಹಾಲನ್ನು ಪಾಕೇಟ್ ನಲ್ಲಿ ಹಾಕಲಾಗುತ್ತಿದೆ.
ಈ ಬಾರಿ ಕಳೆದ ವರ್ಷಕ್ಕಿಂತ ಶೇಕಡ 15ರಷ್ಟು ಹಾಲು ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ. ಹೀಗೆ ಹೆಚ್ಚುವರಿಯಾಗಿ ಉತ್ಪಾದನೆಯಾಗುವ ಹಾಲನ್ನು ರೈತರಿಂದ ಖರೀದಿ ಮಾಡಬೇಕು. ಹೀಗಾಗಿ ಹಾಲಿನ ಪ್ರಮಾಣವನ್ನು ಹೆಚ್ಚಳ ಮಾಡಿ, ಗ್ರಾಹಕರಿಂದ 2 ರೂಪಾಯಿ ಹೆಚ್ಚುವರಿಯಾಗಿ ಪಡೆಯುತ್ತಿದ್ದೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ವೇಳೆ ರಾಜ್ಯದಲ್ಲಿ ನಿತ್ಯ ಸರಾಸರಿ 72 ಲಕ್ಷ ಲೀಟರ್ ಗಳಷ್ಟು ಹಾಲು ಸಂಗ್ರಹವಾಗುತ್ತಿತ್ತು. ಈ ಹಿಂದೆ ಹಾಲಿನ ಬೆಲೆಯಲ್ಲಿ 3 ರೂಪಾಯಿ ಹೆಚ್ಚಳ ಮಾಡಿ ಆ ಹೆಚ್ಚಳದ ಬೆಲೆಯನ್ನು ನೇರವಾಗಿ ರೈತರಿಗೆ ವರ್ಗಾಯಿಸುವಂತೆ ಮಾಡಲಾಗಿತ್ತು. ಈ ಬಾರಿ ಉತ್ತಮ ಮಳೆಯಾಗುತ್ತಿರುವ ಕಾರಣ ಹಾಲು ಉತ್ಪಾದನೆಯೂ ಹೆಚ್ಚಾಗಲಿದೆ. ಹೀಗಾಗಿ ಈ ನಿರ್ಧಾರ ಎಂದಿದ್ದಾರೆ.