ಬೆಂಗಳೂರಿಗೆ ಆರೆಂಜ್ ಅಲರ್ಟ್ : ಶಾಲಾ-ಕಾಲೇಜಿಗೆ ರಜೆ..!
ಬೆಂಗಳೂರು : ಕಳೆದ ಕೆಲವು ದಿನದಿಂದ ರಾಜ್ಯದಲ್ಲಿ ಮಳೆಯಾಗುತ್ತಲೆ ಇದೆ. ಆದರೆ ರಾಜ್ಯದ ಹಲವೆಡೆ ಇಂದು ಬೆಳಗ್ಗಿನ ಜಾವದಿಂದ ಹಿಡಿದುಕೊಂಡಿರುವ ಮಳೆ ಬಿಟ್ಟೆ ಇಲ್ಲ. ಒಂದೇ ಸಮ ಸುರಿಯುತ್ತಿರುವ ಮಳೆಗೆ ಜನ ಹೈರಾಣಾಗಿದ್ದಾರೆ. ಮುಂದಿನ ನಾಲ್ಕು ದಿನ ಇದೇ ರೀತಿಯ ಮಳೆ ಇರಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅದರ ಜೊತೆಗೆ ಬೆಂಗಳೂರು ನಗರಕ್ಕೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ.
ಇಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬೆಂಬಿಡದೆ ಮಳೆ ಸುರಿದಿದೆ. ಆದರೆ ನಾಳೆ ಧಾರಾಕಾರ ಮಳೆಯಾಗುವ ಮುನ್ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ. ಹೀಗಾಗಿ ಶಾಲಾ ಕಾಲೇಜುಗಳು ಹೈಅಲರ್ಟ್ ಆಗಿವೆ. ನಾಳೆ ಜೋರು ಮಳೆಯಾಗುವ ಮುನ್ಸೂಚನೆ ಇರುವ ಕಾರಣ, ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ. ಜಿಲ್ಲಾಧಿಕಾರಿ ಜಗದೀಶ್ ಅವರು ಅಕ್ಟೋಬರ್ 16ರಂದು ಅಂದ್ರೆ ನಾಳೆ ಬೆಂಗಳೂರಿನ ಎಲ್ಲಾ ಶಾಲಾ ಕಾಲೇಜಿಗೂ ರಜೆ ಘೋಷಣೆ ಮಾಡಿದ್ದಾರೆ.
ಆದರೆ ಬಹುತೇಕ ಶಾಲೆಗಳಲ್ಲಿ ಇನ್ನು ಕೂಡ ದಸರಾ ರಜೆ ಮುಗಿದಿಲ್ಲ. ಕೆಲ ಖಾಸಗಿ ಶಾಲೆಗಳು ನಡೆಯುತ್ತಿದ್ದು, ನಾಳೆ ಜೋರು ಮಳೆಯ ಮುನ್ಸೂಚನೆಯ ಹಿನ್ನೆಲೆ ರಜೆ ಘೋಷಣೆ ಮಾಡಲಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಸ್ವಲ್ಪ ಮಳೆಯಾದರೂ ರಸ್ತೆ ಗುಂಡಿಗಳು ಉಕ್ಕಿ ಹರಿಯುತ್ತವೆ. ಈಗ ಒಂದೇ ಸಮನೇ ಸುರಿಯುತ್ತಿರುವ ಮಳೆಯಿಂದ ಸಾಕಷ್ಟು ಅನಾಹುತಗಳಾಗುವ ಸಾಧ್ಯತೆಯೂ ಇದೆ. ಹೀಗಾಗಿ ಜನ ಕೂಡ ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಹೊರಗೆ ಓಡಾಡುವ ದ್ವಿಚಕ್ರ ವಾಹನ ಸವಾರರಿಗೆ ಇದು ಸವಾಲಿನ ಸಮಯವೇ ಸರಿ. ಮಳೆಯಿಂದ ಕಾಪಾಡಿಕೊಳ್ಳಲು ಬೇಕಾದ ಮುಂಜಾಗ್ರತ ಕ್ರಮ ತೆಗೆದುಕೊಳ್ಳಬೇಕಾಗಿದೆ.