ಸಿದ್ದಗಂಗಾ ಮಠಕ್ಕೆ 70 ಲಕ್ಷ ರೂ.ಬಿಲ್ ಪಾವತಿ ನೋಟೀಸ್ ಗೆ ವಿರೋಧ : ನೋಟೀಸ್ ವಾಪಾಸ್ ಪಡೆಯುವುದಾಗಿ ಹೇಳಿದ ಸಚಿವರು..!
ತುಮಕೂರು: ತುಮಕೂರಿನ ಸಿದ್ದಗಂಗಾ ಮಠಕ್ಕೆ ಕೆಐಎಡಿಬಿ ಸಂಸ್ಥೆಯಿಂದ ನೋಟೀಸ್ ಜಾರಿಯಾಗಿದೆ. ಸುಮಾರು 70 ಲಕ್ಷ ಹಣ ಕಟ್ಟಬೇಕೆಂದು ನೋಟೀಸ್ ನೀಡಿದೆ. ಈ ನೋಟೀಸ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಪರಿಷತ್ ಸದಸ್ಯ ಸಿಟಿ ರವಿ ಅವರು ಕೂಡ ಈ ವಿಚಾರವಾಗಿ ಬೆಳಗಾವಿಯಲ್ಲಿ ವಾಗ್ದಾಳಿ ನಡೆಸಿದ್ದರು. ಕರ್ನಾಟಕದಲ್ಲಿ ಮಠಗಳಿಗೆ ಕೊಡುವ ಪರಂಪರೆ ಇದೆ. ಆದರೆ ಮಠದಿಂದ ಕಿತ್ತುಕೊಳ್ಳುವುದು ಇದ್ಯಾವ ಸೀಮೆಯ ಪರಂಪರೆ. ಹಲವು ಮಠಗಳು ಅನ್ನದಾಸೋಹ, ಉಚಿತ ಶಿಕ್ಷಣ ನೀಡುತ್ತಿವೆ. ಹೀಗಾಗಿ ಮಠಗಳಿಗೆ ಕೊಡುವ ಪರಂಪರೆ ನಮ್ಮಲ್ಲಿದೆ. ಮಠದಿಂದಲೇ ಕಿತ್ತುಕೊಳ್ಳುವ ಸರ್ಕಾರ ಯಾವ ಪರಿಸ್ಥಿತಿಗೆ ಬಂದಿದೆ..? ಹಾಗಾದರೇ ಇವರು ಭಿಕಾರಿಗಳಾಗಿದ್ದಾರಾ ಎಂದೆಲ್ಲ ವಾಗ್ದಾಳಿ ನಡೆಸಿದ್ದರು.
ಈ ನೋಟೀಸ್ ವಿಚಾರ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಸಚಿವ ಎಂ.ಬಿ ಪಾಟೀಲ್ ಅವರು ನೋಟೀಸ್ ವಾಪಾಸ್ ಪಡೆಯುವ ಬಗ್ಗೆ ಮಾತನಾಡಿದ್ದಾರೆ. ಅಧಿಕಾರಿಗಳ ತಪ್ಪು ಕಂಡು ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಸಿದ್ದಗಂಗಾ ಮಠದ ಬಗ್ಗೆ ನಮಗೆಲ್ಲರಿಗೂ ಗೊತ್ತು. ಸಿದ್ಧಗಂಗಾ ಮಠಕ್ಕೆ ಕೊಟ್ಟಿರುವ ನೋಟೀಸ್ ವಾಪಾಸ್ ಪಡೆಯುತ್ತೇವೆ. ಕೆಐಎಡಿಬಿ ಹಾಗೂ ಮಠದ ಸ್ವಾಮೀಜಿ ಬಳಿಯೂ ಈ ಬಗ್ಗೆ ಮಾತನಾಡುತ್ತೇನೆ. ಕೆಐಎಡಿಬಿ ವ್ಯಾಪ್ತಿಗೆ ಬರುವ ನೀರನ್ನೇ ಮಠಕ್ಕೆ ಬಳಸಿಕೊಂಡರೂ ಪರವಾಗಿಲ್ಲ ಎಂದಿದ್ದಾರೆ.
ಇನ್ನು ನೋಟೀಸ್ ಕೊಡುವುದಕ್ಕೂ ಮುನ್ನ ಸಿದ್ದಗಂಗಾ ಸ್ವಾಮೀಜಿಗಳು ಕೆಐಎಡಿಬಿಗೆ ಪತ್ರ ಬರೆದಿದ್ದಾರೆ. ದೇವರಾಯಪಟ್ಟಣದ ಕೆರೆಯಲ್ಲಿ ಮಠದ ಬಳಕೆಗೆಂದು ಸ್ಥಾಪಿಸಲ್ಪಟ್ಟ ಶುದ್ದೀಕರಣ ಘಟಕ ಇನ್ನು ಆರಂಭವಾಗದೆ ಇರುವುದು, ಮಠಕ್ಕೆ ಅಕ್ಕ ಪಕ್ಕದ ಗ್ರಾಮಗಳಿಂದ ನೀರು ಸರಬರಾಜು ಮಾಡಲಾಗುತ್ತಿರುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದು, ಇದಕ್ಕೆ ಮಠದಿಂದ ವಿದ್ಯುತ್ ಬಿಲ್ ಪಾವತಿಸಲು ಹೇಗೆ ಬರುತ್ತದೆ ಎಂದು ಕೇಳಿದ್ದಾರೆ. ಸರ್ಕಾರದ ಕರ್ತವ್ಯದ ಬಗ್ಗೆಯೂ ಮನವರಿಕೆ ಮಾಡಿದ್ದಾರೆ.