ಮತ್ತೊಮ್ಮೆ ಲೋಕಸಭೆಯ ಸ್ಪೀಕರ್ ಆಗಿ ಓಂ ಬಿರ್ಲಾ...!
ಸುದ್ದಿಒನ್, ನವದೆಹಲಿ, ಜೂನ್.25 : 18ನೇ ಲೋಕಸಭೆಯ ಮೊದಲ ಅಧಿವೇಶನ ಆರಂಭವಾಗಿದೆ. ಜುಲೈ 3ರವರೆಗೆ ನಡೆಯಲಿರುವ ಈ ಅಧಿವೇಶನದ ಎರಡನೇ ದಿನ ನೂತನ ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ಸಭೆಯ ಮೊದಲ ದಿನವೇ 262 ಸಂಸದರು ಪ್ರಮಾಣ ವಚನ ಸ್ವೀಕರಿಸಿದರು. ರಾಹುಲ್ ಗಾಂಧಿ, ಅಖಿಲೇಶ್ ಯಾದವ್ ಮತ್ತು ಡಿಂಪಲ್ ಯಾದವ್ ಸೇರಿದಂತೆ ಇನ್ನುಳಿದ 270 ಸಂಸದರು ಇಂದು ಮಧ್ಯಾಹ್ನ 3 ರಿಂದ 4 ರವರೆಗೆ ಲೋಕಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇದೇ ವೇಳೆ ಲೋಕಸಭೆ ಸ್ಪೀಕರ್ ಆಯ್ಕೆಗೆ ಇಂದು ಹೆಸರು ಅಂತಿಮವಾಗಲಿದೆ. ಓಂ ಬಿರ್ಲಾ ಅವರು ಮತ್ತೊಮ್ಮೆ ಲೋಕಸಭೆಯ ಸ್ಪೀಕರ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಇಂದು ಬೆಳಗ್ಗೆ 11.30ಕ್ಕೆ ಲೋಕಸಭೆ ಸೆಕ್ರೆಟರಿಯೇಟ್‌ನಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಅಮಿತ್ ಶಾ, ಜೆಪಿ ನಡ್ಡಾ ಮತ್ತು ಓಂ ಬಿರ್ಲಾ ಅವರು ಸಂಸತ್ ಭವನದಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ಓಂ ಬಿರ್ಲಾ ಅವರು ಎನ್‌ಡಿಎ ನಾಯಕರೊಂದಿಗೆ ಸ್ಪೀಕರ್ ಹುದ್ದೆಗೆ ನಾಮಪತ್ರ ಸಲ್ಲಿಸಿದರು.
ಮತ್ತೊಂದೆಡೆ ಬಿಜೆಪಿ ಉಪಸಭಾಪತಿ ಸ್ಥಾನವನ್ನು ಪ್ರತಿಪಕ್ಷಗಳಿಗೆ ನೀಡುವ ಸಾಧ್ಯತೆ ಇದೆ ಎಂದು ವಿಶ್ವಸನೀಯ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಎನ್‌ಡಿಎ ಸ್ಪೀಕರ್ ಅಭ್ಯರ್ಥಿಯ ನಾಮಪತ್ರ ಸಲ್ಲಿಕೆಗೆ ಎಲ್ಲಾ ನಾಯಕರು ಹಾಜರಿದ್ದರು.