ಕಲಾಪಕ್ಕೆ ಬರುತ್ತಿಲ್ಲ.. ಜಮೀರ್ ಗೆ ಮುಖ ತೋರಿಸಲು ಹೇಳಿ : ಹೊರಟ್ಟಿ
ಬೆಳಗಾವಿ: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ನಾಯಕರು ಪ್ರಚಾರದಲ್ಲಿ ಭಾಗಿಯಾಗಿದ್ದರು. ಅದರಲ್ಲಿ ಜಮೀರ್ ಅಹ್ಮದ್ ಖಾನ್ ಪ್ರಚಾರದ ವೇಳೆ ಸ್ಪೀಕರ್ ಬಗ್ಗೆ ಮಾತನಾಡಿದ್ದರು. ಬಿಜೆಪಿ ಶಾಸಕರು ಕೂಡ ನಮಸ್ಕಾರ ಸಾಬ್ ಎನ್ನಬೇಕು ಎಂದಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದರು. ಇದೇ ವಿಚಾರ ಬೆಳಗಾವಿಯ ಅಧಿವೇಶನದಲ್ಲೂ ಚರ್ಚೆಗೆ ಬಂದಿದೆ.
ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅವರು ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಸ್ವಲ್ಪ ಜಮೀರ್ ಅಹ್ಮದ್ ಅವರಿಗೆ ಮುಖ ತೋರಿಸಲು ಹೇಳಿ. ಕಲಾಪಕ್ಕೆ ಯಾಕೆ ಬರುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ. ಈ ವಿಚಾರ ಪ್ರಸ್ತಾಪಕ್ಕೆ ಬರುತ್ತಿದ್ದಂತೆ ಬಿಜೆಪಿ ಸದಸ್ಯರೆಲ್ಲಾ ಗದ್ದಲ ಸೃಷ್ಟಿಸಿದ್ದಾರೆ. ಕಲಾಪದಲ್ಲಿ ಜಮೀರ್ ಅಹ್ಮದ್ ಖಾನ್ ಗೆ ತರಾಟೆಗೆ ತೆಗೆದುಕೊಂಡಿದ್ದಾರೆ.
ಕೋಟಾ ಶ್ರೀನಿವಾಸ ಪೂಜಾರಿ ಆಕ್ರೋಶ ಹೊರ ಹಾಕಿದ್ದು, ಸಚಿವ ಜಮೀರ್ ಗೆ ಸ್ಪೀಕರ್ ಸ್ಥಾನದ ಮೇಲೆ ವಿಶ್ವಾಸ ಇಲ್ಲ. ಸ್ಪೀಕರ್ ಸ್ಥಾನಕ್ಕೆ ಧರ್ಮದ ಲೇಪನ ಬಳಿದು ಮಾತನಾಡಿದ್ದಾರೆ. ಸ್ಪೀಕರ್, ಸಭಾಪತಿ ಸ್ಥಾನಕ್ಕೆ ಗೌರವ ಇಲ್ಲ ಅಂತ ಅವರು ಬಂದಿಲ್ಪವಾ ಎಂದು ಕೇಳಿದ್ದಾರೆ. ಇದೆ ವೇಳೆ ನಾರಾಯಾಣಸ್ವಾಮಿ ಮಾತನಾಡಿ, ಸರ್ಕಾರಕ್ಕೆ ಸಭಾಪತಿ ಚಾಟಿ ಬೀಸಬೇಕು. ಮುಖ ತೋರಿಸಿ ಅಂತ ಮಾತ್ರ ಹೇಳಿದರೆ ಹೇಗೆ ಎಂದಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಕಲಾಪಕ್ಕೆ ಗೈರಾಗಿರುವುದನ್ನು ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಂಡಿದ್ದಾರೆ. ಬಿಜೆಪಿ ನಾಯಕರು ಇದೇ ವಿಚಾರಕ್ಕೆ ಗದ್ದಲ ಎಬ್ಬಿಸಿದ್ದಾರೆ.