ಈ ವರ್ಷ ಪಠ್ಯ ಪುಸ್ತಕದ ಪರಿಷ್ಕರಣೆ ಇಲ್ಲ : ಮಧು ಬಂಗಾರಪ್ಪ
ಮೈಸೂರು: ಶೈಕ್ಷಣಿಕ ವರ್ಷ ಬಂದರೆ ಮಕ್ಕಳು ಹಾಗೂ ಪೋಷಕರಿಗೆ ಶಾಲಾ ಪಠ್ಯಪುಸ್ತಕದ್ದೇ ಹೊಸ ಚಿಂತೆ ಶುರುವಾಗುತ್ತದೆ. ಬದಲಾವಣೆ ಆಗುತ್ತಾ ಆಗುವುದಿಲ್ಲವಾ ಎಂಬ ಪ್ರಶ್ನೆ ಇರುತ್ತದೆ. ಇದೀಗ ಆ ಗೊಂದಲಗಳಿಗೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ ತೆರೆ ಎಳೆದಿದ್ದಾರೆ. ಈ ಶೈಕ್ಷಣಿಕ ವರ್ಷದಲ್ಲಿ ಶಾಲಾ ಪಠ್ಯಪುಸ್ತಕದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ ಎಂದಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಕೆಲವು ವ್ಯಾಕರಣ ಪದಗಳನ್ನಷ್ಟೇ ಬದಲಾವಣೆ ಮಾಡಲಾಗಿದೆ. ಅಂದರೆ ತಪ್ಪಿದ್ದ ಪದವನ್ನು ಮಾತ್ರ ತಿದ್ದಲಾಗಿದೆ. ಅದು ಬಿಟ್ಟರೆ ಬೇರೆ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಇನ್ನುಪಠ್ಯ ಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಬಗ್ಗೆ ಮಾತನಾಡಿ, ಈಗಾಗಲೇ ಶೇ.95 ರಷ್ಟು ಪಠ್ಯಪುಸ್ತಕ ಹಾಗೂ ಸಮವಸ್ತ್ರ ವಿತರಣೆ ಮಾಡಲಾಗಿದೆ. ಈ ತಿಂಗಳ ಒಳಗೆ ಶೇ.100ರಷ್ಟು ವಿತರಣೆ ಮಾಡಲಾಗುತ್ತದೆ ಎಂದಿದ್ದಾರೆ.
ಈ ಬಾರಿ ಕಾಂಗ್ರೆಸ್ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಬಹುದು ಎಂಬ ವದಂತಿಗಳು ಹಬ್ಬಿದ್ದವು. ಈ ಹಿಂದೆ ಬಿಜೆಪಿ ಸರ್ಕಾರ ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿತ್ತು ಕೂಡ. ಈ ಬಾರಿ ಕಾಂಗ್ರೆಸ್ ಸರ್ಕಾರ ಬದಲಾವಣೆ ಮಾಡಬಹುದು ಎನ್ನಲಾಗಿತ್ತು.
ಇಷ್ಟು ದಿನ ಬೇಸಿಗೆ ರಜೆಯಲ್ಲಿದ್ದು ಮಜಾ ಮಾಡುತ್ತಿದ್ದ ಮಕ್ಕಳಿಗೆ ನಾಳೆಯಿಂದಾನೇ ಜವಾಬ್ದಾರಿ ಹೆಚ್ಚಾಗಲಿದೆ. ರಾಜ್ಯಾದ್ಯಂತ ನಾಳೆಯಿಂದ ಶಾಲೆಗಳು ಪುನರಾರಂಭವಾಗಲಿವೆ. ಮೇ 31ರಿಂದ ಮಕ್ಕಳಿಗೆ ಸಿಹಿ ನೀಡಿ, ಶಿಕ್ಷಕರು ಸ್ವಾಗತ ಕೋರಲಿದ್ದಾರೆ. ಹೊಸದಾಗಿ ಸೇರ್ಪಡೆಯಾಗುವ ಮಕ್ಕಳ ಖುಷಿಯೇ ಒಂದು ರೀತಿಯಾದರೆ ಮುಂದಿನ ಕ್ಲಾಸ್ ಗೆ ಪ್ರಮೋಟ್ ಆದ ಮಕ್ಕಳಿಗೆ ಮತ್ತೊಂದು ರೀತಿಯ ಖುಷಿ ಇರುತ್ತದೆ.