ಇನ್ನು ಮುಂದೆ ಸಿನಿಮಾ ಮಾಡಲ್ಲ : ನಿಖಿಲ್ ಕುಮಾರಸ್ವಾಮಿಯ ದಿಢೀರ್ ನಿರ್ಧಾರಕ್ಕೆ ಕಾರಣವೇನು..?
ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ನಿಖಿಲ್ ಕುಮಾರಸ್ವಾಮಿ ಐದು ವರ್ಷ ರಾಜಕೀಯದ ಕಡೆಗೆ ಗಮನ ಕೊಡಲ್ಲ. ಸಿನಿಮಾ ಮಾಡಿಕೊಂಡು ಇರುತ್ತೀನಿ ಎಂದಷ್ಟೇ ಹೇಳಿದ್ದರು. ಲೋಕಸಭಾ ಚುನಾವಣೆ ಬಂದಾಗಲೂ ಅವರ ಸ್ಪರ್ಧರ ಬಗ್ಗೆ ಗುಸುಗುಸು ಎದ್ದಿತ್ತು. ಮಂಡ್ಯ ಕ್ಷೇತ್ರ ಬಿಜೆಪಿಯಿಂದ ಜೆಡಿಎಸ್ ಗೆ ಸಿಕ್ಕಾಗ ಸೋತಲ್ಲಿಯೇ ನಿಖಿಲ್ ಮತ್ತೆ ಪುಟಿದೇಳುತ್ತಾರಾ ಎಂಬ ಪ್ರಶ್ನೆ ಕುಮಾರಸ್ವಾಮಿ ಅವರ ಅಂಗಳದಲ್ಲಿ ಬಿದ್ದಿತ್ತು. ನಿಖಿಲ್ ಇನ್ನೈದು ವರ್ಷ ಸಿನಿಮಾ ಕಡೆ ಗಮನ ಕೊಡುತ್ತಾರೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದರು. ಆದರೆ ಇದ್ದಕ್ಕಿದ್ದ ಹಾಗೇ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳಿದ್ದಾರೆ.
ಜೆಡಿಎಸ್ ನ ಯುವನಾಯಕ ನಿಖಿಲ್ ಕುಮಾರಸ್ವಾಮಿ ಅವರು ಮಂಡ್ಯದಿಂದ ಇಂದು ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ನಾನು ಇನ್ಮುಂದೆ 24*7 ರಾಜಕಾರಣಿ. ಸಿನಿಮಾ ಮಾಡುವುದನ್ನು ಬಂದ್ ಮಾಡುತ್ತೇನೆ ಎಂದಿದ್ದಾರೆ. ಇದನ್ನು ಕೇಳಿ ಹಲವರಿಗೆ ಆಶ್ಚರ್ಯವಾಗಿದೆ. ನಾನು ಇನ್ನು ಪಕ್ಷ ಕಟ್ಟುವ ಕಡೆಗೆ ಗಮನ ಕೊಡುತ್ತೇನೆ. ರಾಜ್ಯಾದ್ಯಂತ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡುತ್ತೀನಿ. ಇನ್ನು ಫುಲ್ ಟೈಮ್ ರಾಜಕಾರಣದಲ್ಲಿ ಇರುತ್ತೇನೆ. ಇನ್ನು ಸಿನಿಮಾ ಮಾಡುವುದನ್ನು ಬಂದ್ ಮಾಡಿದ್ದೇನೆ ಎಂದಿದ್ದಾರೆ.
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆಗೆ ಸೇರಿ ಮೂರು ಕ್ಷೇತ್ರಗಳ ಪೈಕಿ ಎರಡು ಕ್ಷೇತ್ರದಲ್ಲಿ ಗೆಲುವು ಸಾಧಿಸಿತ್ತು. ಮಂಡ್ಯ, ಕೋಲಾರದಲ್ಲಿ ಗೆದ್ದಿದೆ. ಹಾಸನದಲ್ಲಿ ಒಎನ್ ಡ್ರೈವ್ ಪ್ರಕರಣದಿಂದಾಗಿ ಪ್ರಜ್ವಲ್ ಸೋಲು ಕಂಡಿದ್ದರು. ಕುಮಾರಸ್ವಾಮಿ ಮಂಡ್ಯದಿಂದ ಗೆದ್ದು, ಸಂಸದರಾಗುತ್ತಿದ್ದಾರೆ. ಶಾಸಕರಾಗಿದ್ದ ಚನ್ನಪಟ್ಟಣ ತೆರವಾಗುತ್ತಿದ್ದು, ಉಪಚುನಾವಣೆ ನಡೆಯಲಿದೆ. ಈ ಕ್ಷೇತ್ರದಲ್ಲಿ ನಿಖಿಲ್ ಸ್ಪರ್ಧೆ ಮಾಡ್ತಾರಾ ಎಂಬ ಪ್ರಶ್ನೆಯೂ ಇದ್ದು, ಈ ಬಗ್ಗೆ ನಿಖಿಲ್ ಕುಮಾರಸ್ವಾಮಿ ಮಾತನಾಡಿದ್ದು, ಮೈತ್ರಿ ಪಕ್ಷಗಳು ಸಮಾಲೋಚನೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. ನನ್ನ ಆಸಕ್ತಿ ಪಕ್ಷದ ಸಂಘಟನೆಯಲ್ಲಿದೆ ಎಂದಿದ್ದಾರೆ.