ಮುಂದಿನ ವರ್ಷದಿಂದ SSLC ವಿದ್ಯಾರ್ಥಿಗಳಿಗೆ ನೋ ಗ್ರೇಸ್ ಮಾರ್ಕ್ಸ್ : ಮಧು ಬಂಗಾರಪ್ಪ ಹೇಳಿದ್ದೇನು..?
ಬೆಂಗಳೂರು: ಈ ವರ್ಷ ಬಂದಂತ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಗ್ರೇಸ್ ಮಾರ್ಕ್ಸ್ ಸಾಕಷ್ಟು ಚರ್ಚೆಯಾಗಿತ್ತು. ಎಸ್ಎಸ್ಎಲ್ಸಿ ಮಕ್ಕಳಿಗೆ ಶೇ.20 ಗ್ರೇಸ್ ಮಾರ್ಕ್ಸ್ ನೀಡಿದ್ದರು. ಕಳೆದ ವರ್ಷಕ್ಕಿಂತ ಶೇ.10ರಷ್ಟು ಫಲಿತಾಂಶ ಕುಸಿತವಾಗಿತ್ತು. ಸಿದ್ದರಾಮಯ್ಯ ಅವರು ಕೂಡ ಈ ವಿಚಾರಕ್ಕೆ ಗರಂ ಆಗಿದ್ದರು. ಇದೀಗ ಇನ್ಮುಂದೆ ಗ್ರೇಸ್ ಮಾರ್ಕ್ಸ್ ಇರಲ್ಲ ಎಂದು ಸಚಿವ ಮಧು ಬಂಗಾರಪ್ಪ ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಮುಂದಿನ ವರ್ಷದಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಕೃಪಾಂಕ ಇರುವುದಿಲ್ಲ ಎಂದಿದ್ದಾರೆ. ಗ್ರೇಸ್ ಮಾರ್ಕ್ಸ್ ಕೊಡಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಹೀಗಾಗಿ ಮುಂದಿನ ವರ್ಷದಿಂದ ಗ್ರೇಸ್ ಮಾರ್ಕ್ಸ್ ನೀಡುವುದಿಲ್ಲ ಎಂದೇ ಹೇಳಿದ್ದಾರೆ.
ಗ್ರೇಸ್ ಮಾರ್ಕ್ಸ್ ನೀಡಿದ್ದರಿಂದಾಗಿ ಅನುತ್ತೀರ್ಣವಾಗುವ ಸಾಧ್ಯತೆ ಇದ್ದ ವಿದ್ಯಾರ್ಥಿಗಳಿಗೆ ಇದು ಅನುಕೂಲವಾಗಿದೆ. ಶೇಕಡ 5-10ರಷ್ಟು ಕೃಪಾಂಕ ನೀಡುತ್ತಿದ್ದ ಮಂಡಳಿಯು ಈ ವರ್ಷ ಇದರ ಪ್ರಮಾಣವನ್ನು ಶೇ.20 ರಷ್ಟು ಹೆಚ್ಚಳ ಮಾಡಿತ್ತು. ಆದರೂ ಫಲಿತಾಂಶ ಕಡಿಮೆ ಬಂದಿತ್ತು. ಹೀಗಾಗಿ ಗ್ರೇಸ್ ಮಾರ್ಕ್ಸ್ ಹೆಚ್ಚಳ ಮಾಡಿದ್ದ ಶಿಕ್ಷಣ ಇಲಾಖೆಯ ತೀರ್ಮಾನಕ್ಕೆ ಸಿಎಂ ಸಿದ್ದರಾಮಯ್ಯ ಅವರು ಗರಂ ಆಗಿದ್ದರು. ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕತೆ ಹಾಗೂ ಶಿಕ್ಷಣ ಗುಣಮಟ್ಟ ಕುಸಿತಕ್ಕೆ ಕಾರಣವಾಗುವ ಕೃಪಾಂಕ ವ್ಯವಸ್ಥೆಯನ್ನು ಮುಂದುವರೆಸದಂತೆ ಸ್ಪಷ್ಟ ನಿರ್ದೇಶನವನ್ನು ಸಿಎಂ ಸಿದ್ದರಾಮಯ್ಯ ಅವರು ನೀಡಿದ್ದರು. ಅದರಂತೆ ಈಗ ಶಿಕ್ಷಣ ಇಲಾಖೆಯೂ ನಿರ್ಧಾರ ತೆಗೆದುಕೊಂಡಿದ್ದು, ಮುಂದಿನ ವರ್ಷದಿಂದ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಸಂಪೂರ್ಣ ಗ್ರೇಸ್ ಮಾರ್ಕ್ಸ್ ನಿಲ್ ಆಗಿದೆ.