ಚನ್ನಪಟ್ಟಣದಲ್ಲಿ ನಿಖಿಲ್ ವರ್ಸಸ್ ಯೋಗೀಶ್ವರ್ : ಯುವರಾಜನ ಸ್ಪರ್ಧೆಗೆ ದೊಡ್ಡಗೌಡ್ರು ಏನಂದ್ರು..?
ಬೆಂಗಳೂರು: ಚನ್ನಪಟ್ಟಣ ಉಪಚುನಾವಣಾ ಅಖಾಡದಲ್ಲಿ ಜಿದ್ದಾಜಿದ್ದಿನ ಕಣವಾಗಿ ಮಾರ್ಪಾಡಾಗಿದೆ. ಏನಾದ್ರು ಆಗಲಿ ಸ್ಪರ್ಧೆ ನಡೆದೇ ಬಿಡಲಿ ಎಂಬಂತೆ ದೊಡ್ಡ ಗೌಡರು ಮೊಮ್ಮಗನನ್ನೇ ಅಖಾಡಕ್ಕೆ ಇಳಿಸಿದ್ದಾರೆ. ಚನ್ನಪಟ್ಟಣಕ್ಕೆ ನಿಖಿಲ್ ಕುಮಾರಸ್ವಾಮಿ ಅವರನ್ನೇ ನಿಲ್ಲಿಸಿ ಎಂದು ಜೆಡಿಎಸ್ ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಬಿತ್ತಿಪತ್ರ ಹಂಚಿದ್ದರು. ಹೀಗಾಗಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಟಿಕೆಟ್ ನೀಡಲಾಗಿದೆ.
ಈ ಬಗ್ಗೆ ಮಾತನಾಡಿದ ದೇವೇಗೌಡರು, ನಿಖಿಲ್ ಕುಮಾರಸ್ವಾಮಿ ಅವರು ಶುಕ್ರವಾರ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ನಾನು ಕೂಡ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗುತ್ತೇನೆ. ಚನ್ನಪಟ್ಟಣದಲ್ಲೇ ಇದ್ದು ಪ್ರಚಾರ ಮಾಡ್ತೇವೆ. ಕಾರ್ಯಕರ್ತರ ಒತ್ತಾಯದ ಮೇರೆಗೆ ನಿಖಿಲ್ ಕುಮಾರಸ್ವಾಮಿ ಅವರನ್ನು ಕಣಕ್ಕೆ ಇಳಿಸಿದ್ದೇವೆ ಎಂದಿದ್ದಾರೆ. ಇನ್ನು ಈ ಸಭೆಯಲ್ಲಿ ಕೇಂದ್ರ ಸಚಿವ ಹೆಚ್. ಡಿ. ಕುಮಾರಸ್ವಾಮಿ, ಜೆಡಿಎಸ್ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು. ಈ ವೇಳೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗಿದೆ.
ಇನ್ನು ಸಭೆ ಬಳಿಕ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೂ ಭೇಟಿ ನೀಡಿದ್ದರು. ಅಲ್ಲಿಯೂ ಮತ್ತೊಮ್ಮೆ ಅಧಿಕೃತವಾಗಿ ಘೋಷಣೆ ಮಾಡಿದರು. ಇದೇ ವೇಳೆ ಬಿಜೆಪಿ ಹಾಗೂ ಜೆಡಿಎಸ್ ಒಟ್ಟಾಗಿ ಸೇರಿ ದೊಡ್ಡ ಅಂತರದಿಂದ ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸುತ್ತೇವೆ. ಪಕ್ಷಾಂತರ ಮಾಡಿದವರ ಬಗ್ಗೆ ಮಾತು ಆಡುವುದಿಲ್ಲ. ನಿಖಿಲ್ ಕುಮಾರಸ್ವಾಮಿ ಅವರನ್ನು ಗೆಲ್ಲಿಸುವುದಷ್ಟೇ ನಮ್ಮ ಗುರಿ ಎಂದಿದ್ದಾರೆ. ಯಡಿಯೂರಪ್ಪ ಅವರ ಮನೆಯಲ್ಲಿ ಬಿಜೆಪಿ ನಾಯಕರು, ಜೆಡಿಎಸ್ ನಾಯಕರು ಸೇರಿದ್ದರು. ಸದ್ಯ ಚನ್ನಪಟ್ಟಣ ನಿಖಿಲ್ ಕುಮಾರಸ್ವಾಮಿ ಅವರನ್ನೇ ಕಣಕ್ಕೆ ಇಳಿಸಿದ್ದು ಮೂರನೇ ಬಾರಿಗೆ ನಿಖಿಲ್ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.