ಮೂರನೇ ಬಾರಿಗೆ ಸೋತ ನಿಖಿಲ್ ಕುಮಾರಸ್ವಾಮಿ...!
ಸುದ್ದಿಒನ್ | ಮಹಾರಾಷ್ಟ್ರ ಮತ್ತು ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಜೊತೆಗೆ ದೇಶಾದ್ಯಂತ ವಿವಿಧ ರಾಜ್ಯಗಳ 48 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಿತು. ಕರ್ನಾಟಕದಲ್ಲಿ ಮೂರು ಸ್ಥಾನಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಂಡೂರು ಕ್ಷೇತ್ರದಿಂದ ಅನ್ನಪೂರ್ಣ ತುಕಾರಾಂ ಅವರು ಈಗಾಗಲೇ ಗೆಲುವು ಸಾಧಿಸಿದ್ದಾರೆ. ಉಳಿದ ಶಿಗ್ಗಾವಿ ಮತ್ತು ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
ರಾಜ್ಯದಲ್ಲಿ ಬಾರೀ ಕುತೂಹಲ ಕೆರಳಿಸಿದ್ದ ಕ್ಷೇತ್ರ ಚನ್ನಪಟ್ಟಣ.
ಈ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಮೊಮ್ಮಗ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ಗೌಡ ಸೋತಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದ ನಂತರ ಕುಮಾರಸ್ವಾಮಿ ಅವರು ತಾವು ಪ್ರತಿನಿಧಿಸುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ಉಪಚುನಾವಣೆ ಅನಿವಾರ್ಯವಾಯಿತು.
ಕುಮಾರಸ್ವಾಮಿ ಅವರು ತಮ್ಮ ಪುತ್ರ ನಿಖಿಲ್ ಅವರನ್ನು ಈ ಸ್ಥಾನದಿಂದ ಕಣಕ್ಕೆ ಇಳಿಸಿದ್ದರು. ಜೆಡಿಎಸ್ ಭದ್ರಕೋಟೆಯಾಗಿದ್ದ ಚನ್ನಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರಿಗೆ ಈ ಬಾರಿಯೂ ನಿರಾಸೆ ತಪ್ಪಲಿಲ್ಲ. ಈ ಮೂಲಕ ಅವರು ಮೂರನೇ ಬಾರಿಗೆ ಸೋತಿದ್ದಾರೆ.
2019ರ ಲೋಕಸಭೆ ಚುನಾವಣೆಯಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದ್ದರು. ಇವರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ನಟಿ ಸುಮಲತಾ ಅವರು ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಕಳೆದ ವರ್ಷ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ಸ್ಪರ್ಧಿಸಿ ಸೋತಿದ್ದರು. ಪ್ರಸ್ತುತ ಉಪಚುನಾವಣೆಯಲ್ಲಿ ಬಿಜೆಪಿ ಬೆಂಬಲವೂ ಸಿಕ್ಕಿದ್ದರಿಂದ ಗೆಲುವಿನ ನಿರೀಕ್ಷೆಯಲ್ಲಿದ್ದರು. ಆದರೆ ನಿರೀಕ್ಷೆ ಹುಸಿಯಾಯಿತು. ಮೂರನೇ ಪ್ರಯತ್ನದಲ್ಲೂ ನಿಖಿಲ್ ನಿರಾಸೆ ಅನುಭವಿಸಿದರು.
ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ. ಪ್ರಚಾರದ ವೇಳೆ ನಿಖಿಲ್ ಕುಮಾರ ಸ್ವಾಮಿ ಚನ್ನಪಟ್ಟಣ ಉಪಚುನಾವಣೆಯನ್ನು ಮಹಾಭಾರತದ ಕುರಕ್ಷೇತ್ರ ಕದನಕ್ಕೆ ಹೋಲಿಸಿದ್ದರು. ಕನ್ನಡದ ಕುರುಕ್ಷೇತ್ರ ಚಿತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ನಟಿಸಿದ ಅವರು, ಚುನಾವಣೆಯಲ್ಲಿ ಅಭಿಮನ್ಯು ಎಂದು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ‘ನನ್ನ ರಾಜಕೀಯ ಜೀವನದಲ್ಲಿ ಸೋಲನ್ನು ಮಾತ್ರ ಕಂಡಿದ್ದೇನೆ. ನನ್ನ ತಾತ, ತಂದೆಯಂತೆ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಿ ಎಂದು ಚನ್ನಪಟ್ಟಣದ ಜನತೆಯಲ್ಲಿ ಚುನಾವಣಾ ಪ್ರಚಾರದ ವೇಳೆ ಮನವಿ ಮಾಡಿದ್ದರು.
ಆದರೆ, ಮತದಾರರು ಈ ಬಾರಿಯೂ ನಿಖಿಲ್ ಅವರನ್ನು ಗೆಲುವಿನ ದಡ ಸೇರಿಸದೇ ನಿರಾಸೆ ಮೂಡಿಸಿದ್ದಾರೆ. ಪ್ರಚಾರದ ಕೊನೆಯ ದಿನ ಹೆಚ್.ಡಿ.ದೇವೇಗೌಡರು ಮೊಮ್ಮಗನ ಪರ ಪ್ರಚಾರ ನಡೆಸಿದ್ದರು. ಕೇಂದ್ರ ಸಚಿವ ವಿ.ಸೋಮಣ್ಣ ಅವರೊಂದಿಗೆ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿದ ದೇವೇಗೌಡರು ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದರು. ಜನವರಿಯಲ್ಲಿ ಕರ್ನಾಟಕ ಸರ್ಕಾರ ಪತನವಾಗಲಿದೆ ಎಂದು ಭವಿಷ್ಯ ನುಡಿದಿದ್ದರು. ತಮ್ಮ ಮೊಮ್ಮಗನನ್ನು ಗೆಲ್ಲಿಸುವಂತೆ ಮತದಾರರನ್ನು ಬೇಡಿಕೊಂಡಿದ್ದರು. ಆದರೆ ಮತದಾರ ಮಾತ್ರ ನಿಖಿಲ್ ಗೆ ನಿರಾಸೆ ಮೂಡಿಸಿದ್ದಾರೆ.