ಚನ್ನಪಟ್ಟಣದಿಂದಲೇ ನಿಖಿಲ್ ಮತ್ತೆ ಸ್ಪರ್ಧೆ : ರೇವಣ್ಣ ಮಾತಿಗೆ ನಿಖಿಲ್ ಏನಂದ್ರು..?
ಬೆಂಗಳೂರು: ನಿಖಿಲ್ ಕುಮಾರಸ್ವಾಮಿ ಈ ಬಾರಿಯ ಉಪಚುನಾವಣೆಯಲ್ಲೂ ಸ್ಪರ್ಧೆ ಮಾಡಿ ಸೋಲುವ ಮೂಲಕ ಸತತ ಮೂರನೇ ಬಾರಿ ಸೋಲು ಕಂಡಿದ್ದಾರೆ. ಆದರೆ ಸೋತರು ಮತ್ತೆ ಪ್ರಯತ್ನ ನಿಲ್ಲಿಸುವುದಿಲ್ಲ ಎಂಬುದನ್ನು ಸಾರಿದ್ದಾರೆ. ಜನರ ಬಳಿಗೆ ಹೋಗುವ ಕೆಲಸ ಮಾಡುತ್ತಿದ್ದು, ಸಮಾವೇಶ ಕೂಡ ನಡೆಸುತ್ತಿದ್ದಾರೆ. ಇದೀಗ ಸೋಲಿನ ಬಗ್ಗೆ, ಮತ್ತೆ ಸ್ಪರ್ಧಿಸುವ ಬಗ್ಗೆ ಮಾತನಾಡಿದ್ದಾರೆ.
'ಮತ್ತೊಂದು ಅವಕಾಶವನ್ನು ಜನ ಕೊಡುತ್ತಾರೆಂದು ನಂಬಿದ್ದೇನೆ. ಜನರಿಗೂ ಒಂದು ಆತ್ಮಸ್ಥೈರ್ಯ ನೀಡಬೇಕು. ಹೀಗಾಗಿ ಸಮಾವೇಶ ಕರೆದಿದ್ದೇವೆ. ಈ ಒಂದು ಉಪಚುನಾವಣೆ ನನ್ನ ಪಾಲಿಗೆ ಅತ್ಯಂತ ಅನಿರೀಕ್ಷಿತ ಸ್ಪರ್ಧೆಯಾಗಿತ್ತು. ನನ್ನ ಮುಂದೆ ಇರುವಂತದ್ದು ಒಂದೇ ಸವಾಲು, ಒಂದೆ ಪ್ರಶ್ನೆ. ಜನತಾ ದಳ ಪಕ್ಷ ಸ್ಥಾನೆಯಾದಾಗಿನಿಂದ 58 ಸೀಟುಗಳನ್ನ ಮುಟ್ಟಿರುವಂಥದ್ದು ನಮ್ಮ ಮುಂದೆ ಇರುವಂತ ಇತಿಹಾಸ. ಜನತಾ ದಳ ಪಕ್ಷವನ್ನು ಒಂದು ದಡ ಮುಟ್ಟಿಸುವಂತ ಕೆಲಸ ಮಾಡಬೇಕಾಗಿದೆ. ಅದಕ್ಕೆ ಸಂಘಟನೆ ಕಟ್ಟುವಂತ ಕೆಲಸವನ್ನ ಮುಂದಿನ ದಿನಗಳಲ್ಲಿ ಮಾಡುತ್ತೇನೆ.
ಪಕ್ಷ ಸಂಕಷ್ಟದಲ್ಲಿದ್ದಾಗ, ಜೊತೆಯಲ್ಲಿ ಜಿಲ್ಲೆಯ ಕಾರ್ಯಕರ್ತರು ಇದ್ದಾಗ, ನಮಗೆ ಎಲ್ಲಾ ಜಿಲ್ಲೆಯ ಕಾರ್ಯಕರ್ತರು ಎಂಎಲ್ಎ ಮಾಡಿದ್ದಾರೆ, ಎಂಪಿ ಸ್ಥಾನ ಕೊಟ್ಟಿದ್ದಾರೆ, ಅದೇ ರೀತಿ ಜನ ಸ್ಥಾನ ಕೊಟ್ಟಂತ ಸಮಯದಲ್ಲಿ ದೇವೇಗೌಡರು ಹಾಗೂ ಕುಮಾರಣ್ಣ ಅವರು ಆ ಸಮಯದಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಕೆಲಸ ಮಾಡಿದ್ದಾರೆ. ಚುನಾವಣೆಯಲ್ಲಿ ಏಳುಬೀಳು ಎನ್ನುವಂತದ್ದು, ಸೋಲು ಗೆಲುವು ಎನ್ನುವಂತದ್ದು ಸರ್ವೇ ಸಾಮಾನ್ಯ. ಜನ ಕೊಟ್ಟ ತೀರ್ಪನ್ನು ಮನಸ್ಸಾರೆ ಒಪ್ಪಿಕೊಳ್ಳುತ್ತೇನೆ. ಮುಂದಿನ ದಿನಗಳಲ್ಲಿ ಜನರ ಮನಸ್ಸನ್ನ ಗೆಲ್ಲುವುದಕ್ಕೆ ಏನು ಮಾಡಬೇಕೋ ಅದನ್ನ ಮಾಡ್ತೀನಿ' ಎಂದಿದ್ದಾರೆ.