ಮೈಸೂರು ದಸರಾಗೆ ಚಾಲನೆ ಕೊಟ್ಟ ನಾದಬ್ರಹ್ಮ ಹಂಸಲೇಖ
ಮೈಸೂರು: ಇಂದಿನಿಂದ ನಾಡಹಬ್ಬ ಮೈಸೂರು ದಸರಾ ಶುರುವಾಗಿದೆ. ನಾದಬ್ರಹ್ಮ ಹಂಸಲೇಖ ಅವರು ದಸರಾಗೆ ಚಾಲನೆ ನೀಡಿದ್ದಾರೆ. ನಾಡ ಅಧಿದೇವತೆ ಚಾಮುಂಡಿ ತಾಯಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ದಸರಾಗೆ ಚಾಲನೆ ನೀಡಲಾಗಿದೆ.
ಈ ಅದ್ದೂರಿ ಸಂಭ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಹೆಚ್ ಸಿ ಮಹದೇವಪ್ಪ, ಕೆ ಹೆಚ್ ಮುನಿಯಪ್ಪ, ವೆಂಕಟೇಶ್, ಕೆಜೆ ಜಾರ್ಜ್ ಸೇರಿದಂತೆ ಹಲವರು ಭಾಗಿಯಾಗಿದ್ದರು. ಅಷ್ಟೇ ಅಲ್ಲದೆ ದಸರಾ ಚಾಲನೆ ವೇಳೆ ಬಿಜೆಪಿ ಸಂಸದ ಪ್ರತಾಪ್ ಸಿಂಹ, ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ, ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ರನ್ನು ತಬ್ಬಿಕೊಂಡು ಶುಭಾಶಯಕೋರಿದರು.
ಮೈಸೂರು ದಸರಾ ಉತ್ಸವದ ಹಿನ್ನೆಲೆ ಇಡೀ ಮೈಸೂರು ಮದುವಣಗಿತ್ತಿಯಂತೆ ಅಲಂಕಾರಗೊಂಡಿದೆ. ಎಲ್ಲೆಡೆ ಕಲರ್ ಫುಲ್ ಲೈಟ್ ಗಳು ಕಾಣಿಸುತ್ತಿವೆ. ಇಂದು ದಸರಾಗೆ ಅಧಿಕೃತ ಚಾಲನೆ ಸಿಕ್ಕಿದ್ದು ಅಕ್ಟೋಬರ್ 24ರವರೆಗೆ ಹಲವು ಕಾರ್ಯಕ್ರಮಗಳು ನಡೆಯಲಿವೆ. ಜಂಬೂ ಸವಾರಿಯೊಂದಿಗೆ ಮೈಸೂರು ದಸರಾ ಮುಗಿಯಲಿದೆ. ನಗರದಲ್ಲಿ ಈ ಹತ್ತು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.