ಅಯೋಧ್ಯೆಯಲ್ಲಿ ಮೈಸೂರಿನ ಶಿಲ್ಪಿ ಕೆತ್ತಿದ ಮೂರ್ತಿ ಫೈನಲ್ : ಅಶೋಕ್, ವಿಜಯೇಂದ್ರ ಕಡೆಯಿಂದ ಶುಭಾಶಯ
ಮೈಸೂರು: ಜನವರಿ 22 ರಂದು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯಾಗಲಿದೆ. ಅಂದು ಪ್ರತಿಷ್ಠಾಪನೆಯಾಗಲಿರುವ ರಾಮ್ ಲಲ್ಲಾ ಮೂರ್ತಿಯ ಬಗ್ಗೆ ಸಾಕಷ್ಟು ಕುತೂಹಲ ಮೂಡಿತ್ತು. ಕಡೆಗೂ ಕರ್ನಾಟಕದ ಶಿಲ್ಪಿಯ ಮೂರ್ತಿಯೇ ಫೈನಲ್ ಆಗಿದೆ. ಮೈಸೂರಿನ ಅರುಣ್ ಯೋಗಿರಾಜ್ ಅವರು ಕೆತ್ತಿರುವ ಮೂರ್ತಿ ಫೈನಲ್ ಆಗಿದೆ. ಇದು ಇಡೀ ರಾಜ್ಯಕ್ಕೆ ಹೆಮ್ಮೆ ಪಡುವಂತ ಸಂಗತಿಯಾಗಿದೆ.
ಅರುಣ್ ಯೋಗಿರಾಜ್, ಮೂಲತಃ ಹೆಚ್ ಡಿ ಕೋಟೆಯ ಹಾರೋಹಳ್ಳಿ ಗ್ರಾಮದವರು. 51 ಇಂಚಿನ ರಾಮ್ ಲಲ್ಲಾ ಮೂರ್ತಿಯನ್ನು ಅರುಣ್ ಯೋಗಿರಾಜ್ ಕೆತ್ತಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಸಮಾರಂಭದ ದಿನ ರಾಮ್ ಲಲ್ಲಾ ಮೂರ್ತಿಗೆ ಪ್ರಾಣ ಪ್ರತಿಷ್ಠಾಪನೆಯಾಗಲಿದೆ. ಅರುಣ್ ಅವರು ಕೆತ್ತಿದ ಮೂರ್ತಿಯೇ ಆಯ್ಕೆಯಾಗಿದ್ದು, ಅವರ ಕುಟುಂಬಸ್ಥರಲ್ಲೂ ಸಂತಸ ತಂದಿದೆ. ಅಷ್ಟೇ ಅಲ್ಲ ಅರುಣ್ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಕರ್ನಾಟಕದ ಹೆಮ್ಮೆಯ ಶಿಲ್ಪಿ ಮೈಸೂರಿನ ಶ್ರೀ ಅರುಣ್ ಯೋಗಿರಾಜ್ ಅವರ ಕೆತ್ತನೆಯ ಶ್ರೀರಾಮನ ಮೂರ್ತಿ ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆಯಾಗಲು ಆಯ್ಕೆಯಾಗಿದ್ದು, ಶ್ರೀರಾಮನ ವಿಗ್ರಹ ಕೆತ್ತನೆಗೆ ಬಳಸಲಾದ ಕಲ್ಲು ಸಹ ನಮ್ಮ ಕರ್ನಾಟಕದ ಎಚ್.ಡಿ.ಕೋಟೆಯದ್ದು ಎಂಬುದು ಮತ್ತೊಂದು ವಿಶೇಷ. ರಾಮದೂತ ಹನುಮಂತನ ಜನ್ಮಸ್ಥಳ ಇರುವ ಪುಣ್ಯಭೂಮಿಯಾದ ಕರ್ನಾಟಕಕ್ಕೂ ಶ್ರೀರಾಮನಿಗೂ ಅವಿನಾಭಾವ ಸಂಭವವಿದೆ. ಶ್ರೀರಾಮನ ಮೂರ್ತಿ ಕೆತ್ತುವ ಐತಿಹಾಸಿಕ ಮತ್ತು ಪುಣ್ಯ ಕಾರ್ಯದಲ್ಲಿ ಭಾಗಿಯಾದ ಕರುನಾಡಿನ ಹೆಮ್ಮೆಯ ಶಿಲ್ಪಿ ಶ್ರೀ @yogiraj_arun ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು ಎಂದು ವಿಪಕ್ಷ ನಾಯಕ ಆರ್ ಅಶೋಕ್ ಟ್ವೀಟ್ ಮಾಡಿದ್ದಾರೆ.
“ಶ್ರೀರಾಮ-ಹನುಮರ ಬಾಂಧವ್ಯಕ್ಕೆ ಕರುನಾಡ ನಂಟಿದೆ, ಇದೀಗ ರಾಮನೂರಿನ ಗುಡಿಯನು
ಮೈಸೂರಿನ ಬಾಲರಾಮನು ಬೆಳಗುವನು” ಮೈಸೂರಿನ ಅಪ್ರತಿಮ ಶಿಲ್ಪ ಕಲಾ ಪ್ರತಿಭೆ ಅರುಣ್ ಯೋಗಿರಾಜ್ ಅವರ ಭಕ್ತಿ ಕೌಶಲ್ಯದ ಕೆತ್ತನೆಯಿಂದ ಪಡಿಮೂಡಿದ ರಾಮಲಲಾ ಮೂರ್ತಿಯು ಜನವರಿ 22 ರಂದು ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ನೆರವೇರುತ್ತಿರುವುದು ಮೈಸೂರಿನ ಹಿರಿಮೆ, ಕರುನಾಡ ಹೆಮ್ಮೆಯಾಗಿದೆ. ರಾಮನ ಭಂಟ ಹನುಮಂತನು ಹುಟ್ಟಿರುವ ನಮ್ಮ ಕನ್ನಡನಾಡಿನಲ್ಲಿ, ಶ್ರೀರಾಮನಿಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಅದೇ ರೀತಿ ಶ್ರೀರಾಮನ ವಿಗ್ರಹವೂ ಕರ್ನಾಟಕದ ಶಿಲ್ಪಿಯಿಂದಲೇ ಕೆತ್ತನೆಯಾಗಿರುವುದು ಭಾವನಾತ್ಮಕ ಭಕ್ತಿ ತರಿಸಿದೆ.ಅಂತರಾಷ್ಟ್ರೀಯ ಗಮನ ಸೆಳೆದ ಕೇದಾರನಾಥದ ಆದಿ ಶಂಕರಚಾರ್ಯ, ದೆಹಲಿಯ ಇಂಡಿಯಾ ಗೇಟ್ ಬಳಿಯ ಸುಭಾಷ್ ಚಂದ್ರ ಬೋಸ್, ಇದೀಗ ವಿಶ್ವ ಹಿಂದೂಗಳ ಹೃದಯದಲ್ಲಿ ನೆಲೆಸಲಿರುವ ಅಯೋಧ್ಯೆಯ ಬಾಲ ರಾಮನ ಮೂರ್ತಿಯ ವಿಗ್ರಹ ರೂಪಿಸಿ, ರಾಜ್ಯಕ್ಕೆ ಶ್ರೇಷ್ಠ ಕೀರ್ತಿ ತಂದ ಶಿಲ್ಪಿ ಶ್ರೀ @yogiraj_arun ಹಾಗೂ ಈ ಕಾರ್ಯದಲ್ಲಿ ಹೆಗಲುಕೊಟ್ಟ ಅವರ ತಂಡದವರಿಗೆ ತುಂಬು ಹೃದಯದ ಅಭಿನಂದನೆಗಳು ಎಂದು ವಿಜಯೇಂದ್ರ ಅವರು ತಿಳಿಸಿದ್ದಾರೆ.