ಮೂಡಾ ಹಗರಣ: ಸಿಬಿಐ ಪ್ರವೇಶ ಮಾಡದಂತೆ ರಾಜ್ಯ ಸರ್ಕಾರದಿಂದ ನಿರ್ಧಾರ..!
ಬೆಂಗಳೂರು: ಮೂಡಾ ಹಗರಣದಲ್ಲಿ ಕೋರ್ಟ್ ರಾಜ್ಯಪಾಲರ ಆದೇಶವನ್ನೇ ಎತ್ತಿ ಹಿಡಿದಿದೆ. ಇದರ ಪರಿಣಾಮ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸಲು ಆದೇಶ ನೀಡಿದೆ. ಲೋಕಾಯುಕ್ತ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು, ತನಿಖೆ ನಡೆಸಬೇಕಿದೆ. ಇದರ ನಡುವೆ ವಿರೋಧ ಪಕ್ಷದ ನಾಯಕರು ರಾಜೀನಾಮೆಗೆ ಒತ್ತಾಯಿಸುತ್ತಿದ್ದಾರೆ. ಇದರ ನಡುವೆ ಕೇಸ್ ಗೆ ಸಿಬಿಐ ಕೂಡ ಎಂಟ್ರಿಯಾಗುವ ಎಲ್ಲಾ ಸಾಧ್ಯತೆ ಇತ್ತು. ಆದರೆ ರಾಜ್ಯ ಸರ್ಕಾರ ಅದಕ್ಕೆ ಆಸ್ಪದ ನೀಡಿಲ್ಲ.
ಇಂದು ನಡೆದ ಸಚಿವ ಸಂಪುಟದಲ್ಲಿ ಈ ಸಂಬಂಧ ನಿರ್ಣಯ ಕೈಗೊಂಡಿದೆ. ಸಿದ್ದರಾಮಯ್ಯ ಪರವಾಗಿ ಅಂದಿನಿಂದಲೂ ಸಚಿವ ಸಂಪುಟ ನಿಂತಿದೆ. ಈಗ ತನಿಖೆಯನ್ನು ಎದುರಿಸುತ್ತೇನೆ, ಆದರೆ ರಾಜೀನಾಮೆ ಕೊಡಲ್ಲ ಎಂದು ಸಿದ್ದರಾಮಯ್ಯ ಅವರು ಕೂಡ ಹೇಳಿದ್ದಾರೆ. ಈಗ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದು, ಈ ಕೇಸಲ್ಲಿ ಸಿಬಿಐ ಎಂಟ್ರಿಯಾಗುವುದಕ್ಕೆ ಅನುಮತಿ ಕೊಡುವುದು ಬೇಡ ಎಂಬ ನಿರ್ಧಾರ ಕೈಗೊಂಡಿದ್ದಾರೆ.
ಈ ಕೇಸಲ್ಲಿ ಕೇಂದ್ರ ಸರ್ಕಾರ ಸಿಬಿಐ ಅನ್ನು ಯಾವುದೇ ಕ್ಷಣದಲ್ಲಿ ಬೇಕಾದರೂ ದುರ್ಬಳಕೆ ಮಾಡಿಕೊಳ್ಳಬಹುದು ಎಂಬ ಭೀತಿ ಇರುವ ಕಾರಣ ಸಚಿವ ಸಂಪುಟ ಈ ತೀರ್ಮಾನ ತೆಗೆದುಕೊಂಡಿದೆ. ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರ ಸಿಬಿಐ ಮುಕ್ತ ಅನುಮತಿ ನೀಡಿರುವ ಅಧಿಸೂಚನೆಯನ್ನು ವಾಪಸ್ ಪಡೆಯಲು ನಿರ್ಧಾರ ಮಾಡಿದೆ. ಈ ಹಿಂದೆ ಭ್ರಷ್ಟಾಚಾರ ತಡೆ ಕಾಯ್ದೆಯಡಿ ನೇರವಾಗಿ ಸಿಬಿಐ ತನಿಖೆ ನಡೆಸಲು ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ ಕಾಯಿದೆ 1946ರ ಅಡಿ ಸರ್ಕಾರ ಅವಕಾಶ ನೀಡಿತ್ತು. ಇದೀಗ ಸಿಬಿಐ ಮುಕ್ತ ತನಿಖೆಗೆ ಇದ್ದ ಕಾಯ್ದೆಯನ್ನು ವಾಪಸ್ ಪಡೆಯಲಾಗಿದೆ. ಆ ಮುಕ್ತ ಅವಕಾಶದ ಬಿಲ್ ವಾಪಸ್‌ಗೆ ನಿರ್ಧಾರ ಮಾಡಲಾಗಿದೆ.