ಮೂಡಾ ಹಗರಣ | ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದರೆ ಸಿಎಂಗೆ ಸಂಕಷ್ಟ : ಬಿಎಸ್ವೈ ಸಿಎಂ ಆಗಿದ್ದಾಗಲೂ ಹೀಗೆ ಆಗಿತ್ತು..!
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಮೂಡಾ ಹಗರಣ ಸಾಕಷ್ಟು ಸಂಚಲನ ಸೃಷ್ಟಿಸಿದೆ. ಸಿಎಂ ಸಿದ್ದರಾಮಯ್ಯ ಸಾಕಷ್ಟು ಬಾರಿ ಇದಕ್ಕೂ ನನಗೂ ಸಂಬಂಧವೇ ಇಲ್ಲ ಎಂದು ಹೇಳಿದರು ವಿರೋಧ ಪಕ್ಷದವರು ಹೋರಾಟ ಮುಂದುವರೆಸಿದ್ದಾರೆ. ಸಾಮಾಜಿಕ ಹೋರಾಟಗಾರ ಈ ಪ್ರಕರಣ ಸಂಬಂಧ ದೂರು ನೀಡಿದ್ದಾರೆ. ಹೀಗಾಗಿ ಎಲ್ಲರ ಚಿತ್ತ ರಾಜಭವನದತ್ತ ನೆಟ್ಟಿದೆ.
ಜುಲೈ 26ರಂದು ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಹಾಂ ರಾಜ್ಯಪಾಲರ ಬಳಿ ಸುದೀಘ ದೂರೊಂದನ್ನು ನೀಡಿದ್ದಾರೆ. ರಾಜ್ಯಪಾಲರು ಕೂಡ ದೂರಿನ ಅನ್ವಯ ಮಾಹಿತಿ ಪಡೆದುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ನೀಡಬೇಕೆಂದು ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ರಾಜ್ಯಪಾಲ ಥಾವರ್ ಚಂದ್, ಸಿದ್ದರಾಮಯ್ಯ ವಿರುದ್ಧ ವಿಚಾರಣಾ ಅನುಮತಿ ಬಗ್ಗೆ ಕಾನೂನು ತಜ್ಞರಿಂದ ಮಾಹಿತಿ ಪಡೆದಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಅವರು ದೆಹಲಿಗೆ ಹೋಗಿದ್ದು, ಎಲ್ಲಾ ಸಮಸ್ಯೆಗಳನ್ನು ಹೈಕಮಾಂಡ್ ನಾಯಕರ ಗಮನಕ್ಕೆ ತಂದಿದ್ದಾರೆ. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು, ನ್ಯಾಯಾಧೀಶರನ್ನು ಭೇಟಿಯಾಗಿ ಸಲಹೆ ಪಡೆದಿದ್ದಾರೆ.
ಪ್ರಾಸಿಕ್ಯೂಷನ್ ವಿಚಾರವಾಗಿಯೇ ಈಗ ಎಲ್ಲರ ಚಿತ್ತ ರಾಜಭವನದತ್ತ ನೆಟ್ಟಿದೆ. ಯಡಿಯೂರಪ್ಪ ಈ ಹಿಂದೆ ಸಿಎಂ ಆಗಿದ್ದಾಗ ಡಿನೋಟಿಫಿಕೇಷನ್ ಆರೋಪಗಳು ಕೇಳಿ ಬಂದಿದ್ದವು. ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೋರಿ ವಕೀಲ ಸಿರಾಜಿನ್ ಭಾಷಾ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಿದ ಅಂದಿನ ರಾಜ್ಯಪಾಲ ಹಂಸರಾಜ ಭಾರದ್ವಾಜ್, ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದರು.
ಬಳಿಕ ಸಿಎಂ ಸ್ಥಾನಕ್ಕೆ ಯಡಿಯೂರಪ್ಪ ರಾಜೀನಾಮೆ ನೀಡಿದ್ದರು. ಬಳಿಕ ಐದು ದೂರುಗಳು ದಾಖಲಾಗಿದ್ದವು. ಜಾಮೀನಿಗಾಗಿ ಯಡಿಯೂರಪ್ಪ ಅರ್ಜಿ ಸಲ್ಲಿಕೆ ಮಾಡಿದ್ದರು, ಲೋಕಾಯುಕ್ತ ವಿಶೇಷ ಕೋರ್ಟ್ ಜಾಮೀನು ಅರ್ಜಿ ತಿರಸ್ಕಾರ ಮಾಡಿ, ನ್ಯಾಯಾಂಗ ಬಂಧನಕ್ಕೆ ನೀಡಿತ್ತು.