ಮೂಡಾ ಪ್ರಕರಣ : ಸಿದ್ದರಾಮಯ್ಯ ಪರ ವಾದ ಮಂಡಿಸಿದ ಹಿರಿಯ ವಕೀಲರು : ಕೋರ್ಟ್ ಹೇಳಿದ್ದೇನು ?
ಬೆಂಗಳೂರು: ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ನೀಡಿದ್ದನ್ನು ಪ್ರಶ್ನಿಸಿ ಸಿಎಂ ಸಿದ್ದರಾಮಯ್ಯ ಕಾನೂನು ಸಮರಕ್ಕೆ ಮುಂದಾಗಿದ್ದರು. ಕೋರ್ಟ್ ನಲ್ಲಿ ಈ ಸಂಬಂಧ ಅರ್ಜಿ ಸಲ್ಲಿಕೆ ಮಾಡಿದ್ದರು. ಇಂದು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡಿಕೆ ಮಾಡಿದೆ.
ಹೈಕೋರ್ಟ್ ನ್ಯಾಯಮೂರ್ತಿ ನಾಗಪ್ರಸನ್ನ ಅವರಿದ್ದ ಪೀಠ, ಸುಮಾರು ಒಂದೂವರೆ ಗಂಟೆಗಳ ಕಾಲ ವಾದ-ಪ್ರತಿವಾದ ಆಲಿಸಿ, ವಿಚಾರಣೆಯನ್ನು ಆಗಸ್ಟ್ 29ರ ಮಧ್ಯಾಹ್ನ 2.30ಕ್ಕೆ ಮುಂದೂಡಿಕೆ ಮಾಡಿದೆ. ಅಲ್ಲದೆ ಜನಪ್ರತಿನಿಧಿಗಳ ಕೋರ್ಟ್ ನ ಆದೇಶವನ್ನು ಆಗಸ್ಟ್ 29ಕ್ಕೆ ಮುಂದೂಡುವಂತೆ ಸೂಚನೆ ನೀಡಿದೆ. ಸ್ನೇಹಮಯಿ ಕೃಷ್ಣ ಹಾಗೂ ಟಿಜೆ ಅಬ್ರಾಹಂ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಗೆ ಖಾಸಗಿ ದೂರು ನೀಡಿದ್ದರು.
ಇನ್ನು ಕೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಪರ ವಾದ ಹೇಗಿತ್ತು..?
ರಾಜ್ಯಪಾಲರು ನೀಡಿದ ಅನುಮತಿ ವಿಧಾನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿತ್ತು. ಟಿ.ಜೆ.ಅಬ್ರಾಹಂ ದೂರು ಕೊಟ್ಟ ದಿನವೇ ರಾಜ್ಯಪಾಲರಿಂದ ನೋಟೀಸ್ ನೀಡಲಾಗಿತ್ತು. ಕ್ಯಾಬಿನೆಟ್ ನಿರ್ಧಾರ ಮೀರಿ ರಾಜ್ಯಪಾಲರಿಂದ ತನಿಖೆಗೆ ಅನುಮತಿ ಕೊಡಲಾಗಿತ್ತು. ಆರ್ಟಿಕಲ್ 163 ಅನ್ವಯ ಕ್ಯಾಬಿನೆಟ್ ತೀರ್ಮನ ಒಪ್ಪಬೇಕಿತ್ತು. ಆದರೆ ಅದನ್ನು ತಿರಸ್ಕರಿಸಿ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಲಾಗಿತ್ತು. ಪ್ರಾಸಿಕ್ಯೂಷನ್ ಗೆ ನೀಡುವುದಕ್ಕೆ ಯಾವುದೇ ಕಾರಣವನ್ನು ಉಲ್ಲೇಖ ಮಾಡಿಲ್ಲ. ಮೂಡಾ ಬಗ್ಗೆ ತನಿಖೆಗೆ ಈಗಾಗಲೇ ಒಂದು ಸಮಿತಿ ರಚನೆಯಾಗಿದೆ. ಜಮೀನು, ಡಿನೋಟಿಫಿಕೇಷನ್ ವಿಚಾರದಲ್ಲಿ ಸಿಎಂ ಪಾತ್ರವಿಲ್ಲ. ಸಿಎಂಗೆ ಮಧ್ಯಂತರ ರಿಲೀಫ್ ನೀಡಬೇಕೆಂದು ಮನುಸಿಂಘ್ವಿ ವಾದ ಮಾಡಿದ್ದಾರೆ.
ಇನ್ನು ರಾಜ್ಯಪಾಲರ ಪರ ವಾದದಲ್ಲಿ,ಗವರ್ನರ್ ಅವರಿಗೆ ಅಗೌರವ ತೋರುವುದು ಸರಿಯಲ್ಲ. ಪ್ರಕರಣದ ಮೆರಿಟ್ ಮೇಲೆ ರಾಜ್ಯಪಾಲರು ತೀರ್ಮಾನ ತೆಗೆದುಕೊಂಡಿದ್ದಾರೆ. ಕ್ಯಾಬಿನೆಟ್ ನಿರ್ಧಾರವನ್ನು ರಾಜ್ಯಪಾಲರು ಒಪ್ಪಲೇಬೇಕಿಲ್ಲ. ತಮ್ಮ ವಿವೇಚನೆಯನ್ನು ಬಳಸಿ ನಿರ್ಧಾರ ತೆಗೆದುಕೊಳ್ಳಬಹುದು ಎಂದು ವಾದ ಮಂಡಿಸಿದ್ದಾರೆ.