ಕಿತ್ತೂರು ರಾಣಿ ಚೆನ್ನಮ್ಮನ ಖಡ್ಗಕ್ಕಾಗಿ ಮೃತ್ಯುಂಜಯ ಸ್ವಾಮೀಜಿ ಆಗ್ರಹ..!
ಬೆಂಗಳೂರು: ಮಹಾರಾಷ್ಟ್ರದ ಪುಣೆಯಲ್ಲಿರುವ ಕಿತ್ತೂರು ರಾಣಿ ಚನ್ನಮ್ಮನ ದಾಖಲೆಗಳು ಮತ್ತು ಮ್ಯೂಸಿಯಂ ನಲ್ಲಿರುವ ಖಡ್ಗವನ್ನು ರಾಜ್ಯಕ್ಕೆ ತರಬೇಕು ಎಂದು ಮೃತ್ಯುಂಜಯ ಸ್ವಾಮೀಜಿ ಮನವಿ ಮಾಡಿದ್ದಾರೆ. ಅದರ ಜೊತೆಗೆ ಚನ್ನಮ್ಮ ಅವರನ್ನು ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಎಂದು ಘೋಷಣೆ ಮಾಡಬೇಕೆಂದು ಕೇಳಿಕೊಂಡಿದ್ದಾರೆ.
ಕಿತ್ತೂರು ರಾಣಿ ಚನ್ನಮ್ಮ ಜಯಂತೋತ್ಸವ ಆಚರಣೆ ವೇಳೆ ಮಾತನಾಡಿದ ಮೃತ್ಯುಂಜಯ ಸ್ವಾಮೀಜಿ ಅವರು, ಸಿಎಂ ಸಿದ್ದರಾಮಯ್ಯ ಅವರಿಗೆ ನಾನು ಮೂರು ಮನವಿ ಮಾಡುತ್ತೇನೆ. ಪುಣೆಯಲ್ಲಿ ಕಿತ್ತೂರು ರಾಣಿ ಚನ್ನಮ್ಮನವರ 32,000 ಪುಟಗಳ ದಾಖಲೆ ಇದೆ. ಶಿವಾಜಿ ಖಡ್ಗವನ್ನು ಹೇಗೆ ರಾಜ್ಯಕ್ಕೆ ತಂದ್ರೋ, ಅದೇ ರೀತಿ ಚನ್ನಮ್ಮರ ಖಡ್ಗವನ್ನು ರಾಜ್ಯಕ್ಕರ ತರಬೇಕು ಎಂದು ಸಿಎಂಗೆ ಮನವಿ ಮಾಡಿದ್ದಾರೆ. ಈ ಸಂಬಂಧ ಕೇಂದ್ರಕ್ಕೆ ಮನವಿ ಮಾಡಬೇಕೆಂದು ಕೇಳಿದ್ದಾರೆ.
ಲೋಕಸಭೆಯಲ್ಲಿ ತಪ್ಪಾಗಿ ದಾಖಲಾಗಿದೆ. ದೇಶದ ಮೊದಲ ಮಹಿಳಾ ಹೋರಾಟಗಾರ್ತಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಎಂದು ನಮೂದಿಸಲಾಗಿದೆ. ಝಾನ್ಸಿರಾಣಿ ಲಕ್ಷ್ಮೀ ಬಾಯಿಗಿಂತ 32 ವರ್ಷ ಮೊದಲೇ ರಾಜ್ಯದಲ್ಲಿ ಕಿತ್ತೂರು ರಾಣಿ ಚನ್ನಮ್ಮ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ. ಕಿತ್ತೂರು ಗ್ರಾಮವನ್ನು 12D ಮಾದರಿಯಲ್ಲಿ ಅಭಿವೃದ್ಧಿ ಪಡಿಸಬೇಕು. ಇಡೀ ಜಗತ್ತಿಗೆ ಕಿತ್ತೂರನ್ನು ಪರಿಚಯಿಸಬೇಕು ಎಂದಿದ್ದಾರೆ.
ಇದೇ ವೇಳೆ ಲಿಂಗಾಯತರ ಬಗ್ಗೆ ಮಾತನಾಡಿದ್ದು, ಈ ವಿಚಾರ ನಮ್ಮ ಗಮನಕ್ಕೂ ಬಂದಿದೆ. ಆದರೆ ಧರ್ಮ ಗುರುಗಳು ಆಡಳಿತದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಸುಮ್ಮನೆ ಇದ್ದೇವೆ. ಸಮಾಜದ ಮುಖಂಡರು ಧ್ವನಿ ಎತ್ತಿದ ಬಳಿಕ ಅದನ್ನು ಸರಿಪಡಿಸುವ ಕೆಲಸ ಮುಖ್ಯಮಂತ್ರಿಗಳು ಮಾಡಬೇಕು ಎಂದಿದ್ದಾರೆ ಮೃತ್ಯುಂಜಯ ಸ್ವಾಮೀಜಿ.