ಸುರೇಶ್ ಹಳ್ಳಿಯ ಸಂಸದ, ಅವರ ಎದುರು ಕುಮಾರಸ್ವಾಮಿ ಸ್ಪರ್ಧಿಸಿದರು ಚಿಂತೆ ಇಲ್ಲ : ಡಿಕೆ ಶಿವಕುಮಾರ್
ಮಂಗಳೂರು: ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಪಿಟೇಷನ್ ಜೋರಾಗಿದೆ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಒಟ್ಟಾಗಿ ಸೇರಿ ಕಾಂಗ್ರೆಸ್ ಅನ್ನು ಸೋಲಿಸಬೇಕು ಎಂಬ ಧ್ಯೇಯ ಹೊಂದಿದ್ದಾರೆ. ಇಬ್ಬರನ್ನು ಮೀರಿ ನಾವೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲಬೇಕೆಂದು ಕಾಂಗ್ರೆಸ್ ತಯಾರಿ ನಡೆಸುತ್ತಿದೆ. ಅದಕ್ಕಾಗಿಯೇ ಈಗಾಗಲೇ ಸಮಾವೇಶಗಳು, ಕಾರ್ಯಕ್ರಮಗಳು ಅಂತ ಓಡಾಡುತ್ತಿದೆ. ಇಂದು ಮಂಗಳೂರಿನಲ್ಲಿ ಕಾಂಗ್ರೆಸ್ ಬೃಹತ್ ಸಮಾವೇಶ ನಡೆಸುತ್ತಿದೆ.
ಲೋಕಸಭಾ ಚುನಾವಣೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕೂಡ ಹೆಚ್ಚಿನ ಸೌಂಡ್ ಮಾಡುತ್ತಿದೆ. ಕಾಂಗ್ರೆಸ್ ನಿಂದ ಡಿಕೆ ಸುರೇಶ್ ಫಿಕ್ಸ್ ಆಗಿದ್ದಾರೆ. ಅವರನ್ನು ಸೋಲಿಸಲು ಸರಿಯಾದ ಕ್ಯಾಂಡಿಡೇಟ್ ಹಾಕಲು ಬಿಜೆಪಿ ಹಾಗೂ ಜೆಡಿಎಸ್ ಥಿಂಕ್ ಮಾಡುತ್ತಿದೆ. ಕುಮಾರಸ್ವಾಮಿ ಅವರನ್ನೇ ನಿಲ್ಲಿಸಿದರೆ ಉತ್ತಮ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಬಗ್ಗೆ ಮಂಗಳೂರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ.
ಬೆಂಗಳೂರು ಗ್ರಾಮಾಂತರದಿಂದ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡಿದರೂ ಚಿಂತೆಯಿಲ್ಲ. ಮಾಜಿ ಪ್ರಧಾನಿ ದೇವೇಗೌಡ ಹಾಗೂ ಕುಮಾರಸ್ವಾಮಿ ವಿರುದ್ಧವೇ ಸ್ಪರ್ಧೆ ಮಾಡಿದವನು ನಾನು. ನನ್ನ ಸಹೋದರ ಸುರೇಶ್ ವಿರುದ್ಧ ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡಿದಾಗಲೂ ಗೆದ್ದಿದ್ದು ಅವನೇ. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಅವನ ವಿರುದ್ಧ ಸ್ಪರ್ಧೆ ಮಾಡಿದಾಗಲೂ ಗೆದ್ದಿದ್ದಾನೆ. ಸುರೇಶ್ ದೆಹಲಿಯಲ್ಲಿ ಕೂರುವ ಸಂಸದನಲ್ಲ, ಹಳ್ಳಿಯ ಸಂಸದ ಆತ. ಹೀಗಾಗಿ ಜನರಿಗೆ ವ್ಯತ್ಯಾಸಗಳು ಗೊತ್ತಾಗುತ್ತವೆ. ದೇವೇಗೌಡ, ಕುಮಾರಸ್ವಾಮಿ ಅವರು ನಮ್ಮಲ್ಲಿ ಎಂಪಿ ಆಗಿದ್ದವರೆ. ಆದರೆ ಹಳೇ ಎಂಪಿಗಳಿಗೂ ಈ ಎಂಪಿಗೂ ವ್ಯತ್ಯಾಸವನ್ನು ಜನ ಕಂಡುಕೊಂಡಿದ್ದಾರೆ. ಯಾರೇ ಸ್ಪರ್ಧೆ ಮಾಡಿದರು ಸ್ವಾಗತ ಮಾಡುತ್ತೇವೆ ಎಂದಿದ್ದಾರೆ.