ಜುಲೈ 15ರಿಂದ ಮಳೆಗಾಲದ ಅಧಿವೇಶನ.. ಖಾದರ್ ಕಡೆಯಿಂದ ವಿಶೇಷತೆ.. ವಿಪಕ್ಷಗಳಿಂದ ಬ್ರಹ್ಮಾಸ್ತ್ರಕ್ಕೆ ಸಿದ್ಧತೆ..!
ಬೆಂಗಳೂರು: ಜುಲೈ 15 ಅಂದರೆ ಸೋಮವಾರದಿಂದ ಮಳೆಗಾಲದ ಅಧಿವೇಶನ ಆರಂಭವಾಗುತ್ತಿದೆ. ಕಳೆದ ಬಾರಿ ಬೆಳಗಾವಿಯಲ್ಲಿ ನಡೆದಿದ್ದ ಅಧಿವೇಶನ ಈ ಬಾರಿ ಬೆಂಗಳೂರಿನಲ್ಲಿಯೇ ನಡೆಯುತ್ತಿದ್ದು, ವಿಧಾನಸೌಧ ಸಿದ್ಧತೆಗೊಂಡಿದೆ. ಈ ಬಾರಿ ನಡೆಯಲಿರುವ ಮಳೆಗಾಲದ ಅಧಿವೇಶನಕ್ಕೆ ಸ್ಪೀಕರ್ ಯು.ಟಿ. ಖಾದರ್ ಹಲವು ವಿಶೇಷತೆಗಳನ್ನು ಪ್ಲ್ಯಾನ್ ಮಾಡಿದ್ದಾರೆ. ಅದರಲ್ಲಿ ವಿಧಾನಸೌಧದ ಅಲಂಕಾರಕ್ಕೆ ಮೊದಲ ಆದ್ಯತೆ ನೀಡಿದ್ದಾರೆ. ಶಾಸಕರ ಬರುವಿಕೆಯನ್ನು ಹೆಚ್ಚಿಸಲು ಈ ಪ್ಲ್ಯಾನ್ ಮಾಡಲಾಗಿದೆ.
ಮುಖ್ಯ ದ್ವಾರದಲ್ಲಿಯೇ ಮೈಸೂರು ಅರಮನೆಯ ರೀತಿಯಲ್ಲಿ ಅಲಂಕಾರ ಮಾಡಿದ್ದಾರೆ. ಮೂರು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇದರಿಂದ ಶಾಸಜರು ಎಷ್ಟು ಬಾರಿ ವಿಧಾನಸೌಧದ ಒಳಗೆ ಬಂದರು, ಹೋದರು ಎಂಬ ಮಾಹಿತಿಯೂ ಸಿಗಲಿದೆ. ಚೆಸ್ ಗೇಮ್ ಕೂಡ ಏರ್ಪಾಡು ಮಾಡಿದ್ದು, ಕಾರ್ಯ ದಕ್ಷತೆ ತೋರಿದವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ನೀಡಲಿದ್ದಾರೆ.
ಇತ್ತ ವಿಪಕ್ಷಗಳು ಸರ್ಕಾರದ ಮೇಲೆ ಸವಾರಿ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಯಾಕಂದ್ರೆ ಸಾಲು ಸಾಲು ಹಗರಣಗಳು ಬೆಳಕಿಗೆ ಬರುತ್ತಿದ್ದು, ಅವುಗಳನ್ನೇ ಬ್ರಹ್ಮಾಸ್ತ್ರ ಮಾಡಿಕೊಂಡಿವೆ. ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಜಂಟಿಯಾಗಿ ದಾಳಿಗೆ ಸನ್ನದ್ಧವಾಗಿವೆ. ಈಗಾಗಲೇ ಉಭಯ ಪಕ್ಷಗಳು ಈ ಬಗ್ಗೆ ಸಭೆ ನಡೆಸಿ, ತೀರ್ಮಾನ ಕೈಗೊಂಡಿವೆ. ಸಂತಾಪ ಸೂಚನೆಯ ಬಳಿಕ ಮೊದಲ ದಿನವೇ ವಾಲ್ಮೀಜಿ, ಮೂಡಾ ಹಗರಣದ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಗ್ಯಾರಂಟಿ ಯೋಜನೆಗಳ ಸಾಧಕ ಬಾಧಕಗಳ ಬಗ್ಗೆಯೂ ಮಳೆಗಾಲದ ಅಧಿವೇಶನದಲ್ಲಿ ವಿಚಾರ ಪ್ರಸ್ತಾಪ ಮಾಡಿ, ಸರ್ಕಾರದ ಮೇಲೆ ಯುದ್ಧ ಮಾಡಲು ರೆಡಿಯಾಗಿದ್ದಾರೆ.