ಬೆಂಗಳೂರಿನಲ್ಲಿ 3 ದಿನ ಸಾಧಾರಣ ಮಳೆ: ಉಳಿದಂತೆ ಎಲ್ಲೆಲ್ಲಿ ಎಷ್ಟು ಮಳೆ ಸಾಧ್ಯತೆ..?
ಬೆಂಗಳೂರು: ಬಿಸಿಬಿಸಿ ಎನ್ನುತ್ತಿದ್ದ ಬೆಂಗಳೂರು ಮಂದಿಗೆ ನಿನ್ನೆ ವರುಣರಾಯ ತಂಪೆರೆದಿದ್ದ. ಮಧ್ಯಾಹ್ನವೇ ಮೋಡ ಕವಿದ ವಾತಾವರಣ ನಿರ್ಮಾಣವಾಗಿತ್ತು. ಕತ್ತಲು ಕವಿದಿತ್ತು. 3 ಗಂಟೆಯ ವೇಳೆಗೆ ಎಲ್ಲೆಲ್ಲೂ ಜೋರು ಮಳೆಯಾಗಿತ್ತು. ಮಳೆ ಕಂಡು ಬೆಂಗಳೂರು ಮಂದಿ ಹರ್ಷ ವ್ಯಕ್ತಪಡಿಸಿದ್ದರು. ಇಂದು ಕೂಡ ಮಳೆ ಬೀಳಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಹವಮಾನ ಇಲಾಖೆನೀಡಿರುವ ಮಾಹಿತಿ ಪ್ರಕಾರ, ಮುಂದಿನ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎಂಬುದನ್ನು ತಿಳಿಸಿದೆ.
ಮೇ 7 ಮತ್ತು 8ರ ನಂತರ ಸಿಲಿಕಾನ್ ಸಿಟಿಯಲ್ಲಿ ಜೋರು ಮಳೆಯಾಗಲಿದೆ. ಆದರೆ ಅದಕ್ಕೂ ಮುನ್ನ ಮೂರು ದಿನಗಳ ಕಾಲ ಸಾಧಾರಣ ಮಳೆಯಾಗಲಿದೆ ಈ ಮೂರು ದಿನಗಳ ಕಾಲ ತಾಪಮಾನವೂ ಮುಂದುವರೆಯುವ ಸಾಧ್ಯತೆ ಇದೆ. ಉಷ್ಣಾಂಶ ಗರಿಷ್ಠ 38 ಡಿಗ್ರಿ ಇರಲಿದ್ದು, ಕನಿಷ್ಠ 24 ಡಿಗ್ರಿ ಮುಂದುವರೆಯುವ ಸಾಧ್ಯತೆ ಇದೆ.
ಇನ್ನು ದಕ್ಷಿಣ ಒಳನಾಡಿನ ಚಾಮರಾಜನಗರ, ಮೈಸೂರು, ಕೊಡಗು, ಮಂಡ್ಯ, ರಾಮನಗರ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳ ಕೆಲವು ಕಡೆಗಳಲ್ಲಿ ಹಗುರವಾದ ಮಳೆ ಸುರಿಯಲಿದೆ. ಮೇ 7ರ ಬಳಿಕ ದಕ್ಷಿಣ ಒಳನಾಡಿನಲ್ಲೂ ಜೋರು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ಸೂಚನೆಯನ್ನು ನೀಡಿದೆ. ಇನ್ನು ಉತ್ತರ ಒಳನಾಡಿನಲ್ಲಿ ಒಣ ಹವೆ ಮುಂದುವರೆಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ. ಸದ್ಯ ಕೊಂಚ ಮಟ್ಟಿಗೆ ಉಷ್ಣಾಂಶ ತಗ್ಗಿದೆ. ಹೀಗಾಗಿ ಜನ ಬಿಸಿಲಿನ ಬೇಗೆಗೆ ಸುಸ್ತಾಗಿದ್ದವರು ಸುಧಾರಿಸಿಕೊಂಡಿದ್ದಾರೆ. ಇನ್ನು ಮೂರು ದಿನಗಳ ಬಳಿಕ ಉತ್ತಮ ಮಳೆಯಾಗಲಿದೆ ಎಂದು ಕೇಳಿನೇ ಸಂತಸಗೊಂಡಿದ್ದಾರೆ.