ಕೊಲೆ ಬೆದರಿಕೆ, ಜಾತಿ ನಿಂದನೆ ಕೇಸ್ ನಲ್ಲಿ ಶಾಸಕ ಮುನಿರತ್ನ ಬಂಧನ : ವಿಚಾರ ಕೇಳಿ ಖುಷಿಯಾಯ್ತು ಎಂದ ದೂರುದಾರ..!
ಬೆಂಗಳೂರು: ನಿನ್ನೆಯೆಲ್ಲಾ ಶಾಸಕ ಮುನಿರತ್ನ ಅವರು ಧಮ್ಕಿ ಹಾಕಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿತ್ತು. ಜೀವ ಬೆದರಿಕೆ ಹಾಗೂ ಜಾತಿ ನಿಂದನೆಯನ್ನು ಆ ಆಡಿಯೋದಲ್ಲಿ ಮಾಡಲಾಗಿತ್ತು. ಇದೀಗ ಶಾಸಕ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆಂಧ್ರದ ಚಿತ್ತೂರಿಗೆ ಹೊರಟಿದ್ದ ಮುನಿರತ್ನ ಅವರನ್ನು ಮುಳುಬಾಗಿಲ ಬಳಿ ಬಂಧಿಸಲಾಗಿದೆ.
ಈ ಸಂಬಂಧ ಮಾತನಾಡಿರುವ ದೂರುದಾರ ಚೆಲುವರಾಜು, ನಾನೊಬ್ಬ ಸಣ್ಣ ಗುತ್ತಿಗೆದಾರ. ನನಗೆ ಮೋಸವಾಗಿದೆ. ನನ್ಮ ದೂರಿನ ಹಿಂದೆ ಯಾವುದೇ ರಾಜಕೀಯ ಶಕ್ತಿಗಳು ಅಡಗಿಕೊಂಡಿಲ್ಲ. ಅಸಲಿಗೆ ರಾಜಕೀಯದಲ್ಲಿ ನನಗೆ ಯಾರೂ ಅಷ್ಟೊಂದು ಪರಿಚಯವೂ ಇಲ್ಲ. ಮುನಿರತ್ನ ಅವರಿಂದ ಎಷ್ಟು ಜನ ಊರು ಬಿಟ್ಟಿದ್ದಾರೆ, ಎಷ್ಟು ಜನ ಮನೆ ಖಾಲಿ ಮಾಡಿದ್ದಾರೆ ಎಂಬುದನ್ನು ಅವರನ್ನೇ ಕೇಳಿ.
ದುಡ್ಡು ಹೊಡೆಯುವುದು ಬಿಟ್ಟರೆ ಅವರಿಗೆ ಬೇರೆ ಏನು ಗೊತ್ತಿಲ್ಲ. ಮುನಿರತ್ನ ಅವರು ನನಗೆ ಮೂರರಿಂದ ನಾಲ್ಕು ವರ್ಷದಿಂದ ಪರಿಚಯವಿದ್ದಾರೆ. ನನಗೆ 20 ಲಕ್ಷ ಮೋಸವಾದಾಗ ಅವರ ವಿರುದ್ಧ ತಿರುಗಿ ನಿಂತೆ. ನಾನು ಯಾವುದೇ ರಾಜಕೀಯ ಪ್ರೇರಣೆಯಿಂದ ದೂರು ಕೊಟ್ಟಿಲ್ಲ. ಅವರು ಅನೇಕ ಬಾರಿ ಬೆದರಿಕೆ ಹಾಕಿದ್ದಾರೆ, ಕೆಟ್ಟದಾಗಿ ಮಾತನಾಡಿದ್ದಾರೆ. ಅವರು ಬಂಧನವಾಗಿದ್ದನ್ನು ಮಾಧ್ಯಮಗಳಲ್ಲಿ ನೋಡಿ ಖುಷಿಯಾಯ್ತು. ನನ್ನ ಪರವಾಗಿ ಜನರು ನಿಂತಿದ್ದಾರೆ. ಮುನಿರತ್ನ ವಿರುದ್ಧ ಕಾನೂನು ಹೋರಾಟಕ್ಕೆ ಸಜ್ಜಾಗಿರುವ ಕಾರಣಕ್ಕೆ ದೂರು ನೀಡಿದ್ದೇನೆ. ಜನ ನನ್ನ ಜೊತೆಗೆ ಇದ್ದಾರೆ ಎಂಬುದೇ ಸಂತಸದ ವಿಚಾರ ಎಂದು ಹೇಳಿದ್ದಾರೆ. ಶಾಸಕ ಮುನಿರತ್ನ ಆಡಿಯೋ ವೈರಲ್ ಆಗುತ್ತಿದ್ದಂತೆ ದೂರು ಕೂಡ ದಾಖಲಾಗಿದೆ. ದೂರಿನ ಆಧಾರದ ಮೇಲೆಮುನಿರತ್ನ ಅವರ ಬಂಧನವಾಗಿದೆ.