ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ : ಸಂಜೆ ಒಳಗೆ 87 ಕೋಟಿ ಹಣ ಬಾರದೆ ಇದ್ದರೆ ಕ್ರಮ ಎಂದ ಸಚಿವ ನಾಗೇಂದ್ರ
ಬೆಂಗಳೂರು: ವಾಲ್ಮೀಕಿ ನಿಗಮದ ಅಧೀಕ್ಷಕ ಚಂದ್ರಶೇಖರ್ ನಿನ್ನೆ ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕೇಸ್ ನಾನಾ ರೀತಿಯ ತಿರುವು ಪಡೆದುಕೊಳ್ಳುತ್ತಿದೆ. ಈ ಸಂಬಂಧ ಇಲಾಖೆಯ ಸಚಿವ ಬಿ.ನಾಗೇಂದ್ರ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ್ದಾರೆ. ಸಂಜೆ ತನಕ ಬ್ಯಾಂಕ್ ನವರಿಗೆ ಡೆಡ್ ಲೈನ್ ಕೊಟ್ಟಿರುವುದಾಗಿ ತಿಳಿಸಿದ್ದಾರೆ.
ನಿನ್ನೆ ನಿಗಮದ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ತುಂಬಾ ದೊಡ್ಡ ಹುದ್ದೆಯಲ್ಲೇನು ಇರಲಿಲ್ಲ. ಚಿಕ್ಕ ಹುದ್ದೆಯಲ್ಲಿಯೇ ಇದ್ದರು. ಅವರ ಕುಟುಂಬಕ್ಕೆ ವಿಷಾದ ವ್ಯಕ್ತಪಡಿಸುತ್ತೇನೆ. ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಎಂಡಿ ಪದ್ಮನಾಭ ಕೂಡ ಈ ಸಂಬಂಧ ದೂರು ನೀಡಿದ್ದಾರೆ. ಆ ಸಹಿ ನನ್ನದಲ್ಲ ಎಂದು ಎಂಡಿ ಕೂಡ ಹೇಳಿದ್ದಾರೆ. ಬ್ಯಾಂಕ್ ಸಿಬ್ಬಂದಿಗಳು ನನ್ನ ಗಮನಕ್ಕೂ ಬಾರದೆ ಹಣ ವರ್ಗಾವಣೆ ಮಾಡಿಕೊಂಡಿದ್ದಾರೆಂದು ದೂರು ನೀಡಲಾಗಿದೆ. ನಿಗಮದ ಖಾತೆಯಲ್ಲಿ 187 ಕೋಟಿಯಷ್ಟು ಹಣ ಇತ್ತು. ಅನಧಿಕೃತ ಖಾತೆಗೆ 87 ಕೋಟಿ ಹಣ ವರ್ಗಾವಣೆಯಾಗಿದೆ. ಅದರಲ್ಲೂ ಮೆಸೇಜ್ ಕೂಡ ಬಾರದಂತೆ ಉಪಖಾತೆಗಳಿಂದ ಹಣ ವರ್ಗಾವಣೆಯಾಗಿದೆ. ಇದು ನನ್ನ ವೈಫಲ್ಯ ಎನ್ನುವುದಕ್ಕಿಂತ ನೋಡಿ ಶಾಕ್ ಆಗಿದ್ದೇನೆ.
ಅದು ಒರಿಜಿನಲ್ ಸಹಿಯೋ, ನಕಲಿಯೋ ಎಂದು ತಿಳಿಯಲು ಎಫ್ಎಸ್ಎಲ್ ಗೆ ಕಳುಹಿಸಲಾಗಿದೆ. ಯಾರು ಎಷ್ಟೇ ಪ್ರಭಾವಿಗಳಾಗಿದ್ದರು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ. ಎಂಡಿ ಸಹಿ ನಿಜವಾದರೆ ಅವರನ್ನು ಹುದ್ದೆಯಿಂದ ವಜಾ ಮಾಡಲಾಗುವುದು. ಸಿಐಡಿ ಪೊಲೀಸರು ಇಂದು ಬೆಳಗ್ಗೆಯಿಂದಾನೇ ತನಿಖೆ ಶುರು ಮಾಡಿದ್ದಾರೆ. ಯೂನಿಯನ್ ಬ್ಯಾಂಕ್ ಅಧ್ಯಕ್ಷರು, ಇಂದು ಸಂಜೆಯೊಳಗೆ ನಿಗಮದ ಹಣವನ್ನು ವರ್ಗಾವಣೆ ಮಾಡುವುದಾಗಿ ತಿಳಿಸಿದ್ದಾರೆ. ತಪ್ಪು ಮಾಡಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.