ಸಚಿವ ನಾಗೇಂದ್ರ ರಾಜೀನಾಮೆ : ಸಿದ್ದರಾಮಯ್ಯ ಹೇಳಿದ್ದೇನು..?
ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಹಣದ ವ್ಯವಹಾರದಿಂದ ಆತ್ಮಹತ್ಯೆ ಮಾಡಿಕೊಂಡಿದ್ದು, ಆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಗಮಕ್ಕೆ ಸಂಬಂಧಪಟ್ಟ ನಿಗಮದ ಸಚಿವ ಬಿ.ನಾಗೇಂದ್ರ ಅವರು ರಾಜೀನಾಮೆ ಕೊಡಬೇಕೆಂದು ಒತ್ತಾಯಿಸಿದರು. ಜೊತೆಗೆ ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ ಎಂದೇ ಹೇಳಲಾಗಿತ್ತು. ಈ ಸಂಬಂಧ ಇದೀಗ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಎಸ್ಐಟಿ ರಚನೆಯಾಗಿ ಇನ್ನೂ ಎರಡು ದಿವಸ ಆಗಿದೆಯಷ್ಟೇ. ಪ್ರಕರಣ ಸಂಬಂಧ ಎಸ್ಐಟಿ ಅಧಿಕಾರಿಗಳು ವರದಿ ನೀಡಿಲ್ಲ. ಸಚಿವ ನಾಗೇಂದ್ರ ಅವರಿಂದ ನಾವೂ ಯಾವುದೇ ವಿವರಣೆ ಕೇಳಿಲ್ಲ. ರಾಜೀನಾಮೆಗೆ ಗಡುವು ಕೊಡುವುದಕ್ಕೆ ಬಿಜೆಪಿಗರು ಯಾರು..? ವಿಪಕ್ಷ ಇರುವುದು ಹೋರಾಟ ಮಾಡುವುದಕ್ಕೆಂದು. ಯಾರೂ ನನಗೆ ಬೆದರಿಕೆಯನ್ನು ಹಾಕಿಲ್ಲ ಎಂದಿದ್ದಾರೆ.
ಇದೇ ವೇಳೆ ಎಕ್ಸಿಟ್ ಪೋಲ್ ಬಗ್ಗೆ ಮಾತನಾಡಿ, ನಾವೂ ಎಕ್ಸಿಟ್ ಪೋಲ್ ಅನ್ನು ಒಪ್ಪುವುದಿಲ್ಲ. ಕರ್ನಾಟಕದಲ್ಲಿ ನಾವೂ 15-20 ಸ್ಥಾನ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ವಿಧಾನಪರಿಷತ್ ಚುನಾವಣೆ ಬಗ್ಗೆ ಮಾತನಾಡಿ, ಜೂನ್ 13ರಂದು ವಿಧನಾಸಭೆಯಿಂದ ವಿಧಾನಪರಿಷತ್ ಗೆ ನಡೆಯಲಿರುವ ಚುನಾವಣೆಗೆ ನಮ್ಮ ಪಕ್ಷದಿಂದ 7 ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಕಾಂಗ್ರೆಸ್ ನ 7 ಅಭ್ಯರ್ಥಿಗಳು ಗೆದ್ದೇ ಗೆಲ್ಲುತ್ತಾರೆ. 9-20 ಮತಗಳು ಬೇಕು. ನಮ್ಮ ಸಂಖ್ಯಾ ಬಲದ ಆಧಾರದ ಮೇಲೆ ಗೆಲ್ಲುತ್ತೇವೆ. ಬಿಜೆಪಿಯ ಮೂವರು, ಜೆಡಿಎಸ್ ನ ಒರ್ವ ಅಭ್ಯರ್ಥಿ ಕಣದಲ್ಲಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ವಾಲ್ಮೀಕಿ ನಿಗಮದ ಅವ್ಯವಹಾರಕ್ಕೆ ಸಂಬಂಧಿಸಿದಂತೆ ಎಸ್ಐಟಿ ತೀವ್ರ ತನಿಖೆ ನಡೆಸುತ್ತಿದ್ದು, ಈಗಾಗಲೇ ಇಬ್ಬರು ಅಧಿಕಾರಿಗಳನ್ನು ಬಂಧಿಸಿದ್ದಾರೆ. ತೀವ್ರ ತನಿಖೆ ನಡೆಸುತ್ತಿದ್ದಾರೆ.