ಪಕ್ವತೆ ಹಾಗೂ ನಿಖರವಾಗಿ ಜಾನುವಾರುಗಳ ಗಣತಿ ಮಾಡಿ : ಎಡಿಸಿ ಬಿ.ಟಿ.ಕುಮಾರಸ್ವಾಮಿ
ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 27 : ಜಾನುವಾರುಗಳ ಗಣತಿಯನ್ನು ಪಕ್ವತೆ ಹಾಗೂ ನಿಖರವಾಗಿ ಮಾಡಿದಾಗ ಸರ್ಕಾರ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸುಲಭವಾಗುತ್ತದೆಂದು ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ವತಿಯಿಂದ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಜಾನುವಾರು ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಮಂಗಳವಾರ ಏರ್ಪಡಿಸಲಾಗಿದ್ದ ತರಬೇತಿ ಉದ್ಘಾಟಿಸಿ 21 ನೇ ಜಾನುವಾರು ಗಣತಿ ಸೂಚನಾ ಕೈಪಿಡಿ ಬಿಡುಗಡೆಗೊಳಿಸಿ ಮಾತನಾಡಿದರು.
ಯಾವುದೇ ಒಂದು ಗಣತಿ ದೇಶದ ಕಾರ್ಯ ಯೋಜನೆ ರೂಪಿಸಿ ಅನುಷ್ಠಾನಗೊಳಿಸಲು ಸಹಾಯವಾಗುತ್ತದೆ. ಹಾಗಾಗಿ ನಿಸ್ಪಕ್ಷಪಾತ, ನಿರ್ಧಿಷ್ಟವಾಗಿರಬೇಕು. ಆಗ ಮಾತ್ರ ಜನರ ಜೀವನ ಮಟ್ಟ ಸುಧಾರಿಸಲು ಸಾಧ್ಯ. ಆಧುನಿಕ ಯುಗದಲ್ಲಿ ಜಾನುವಾರುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಜಾನುವಾರುಗಳು ಇಲ್ಲದಿದ್ದರೆ ರೈತರಿಲ್ಲ. ಕುರಿ, ಮೇಕೆ, ಹಸು, ಎಮ್ಮೆ ಇವುಗಳನ್ನು ಸಾಕುವುದರಿಂದ ಹಾಲು ಗೊಬ್ಬರ ಸಿಗುತ್ತದೆ. ಮನುಷ್ಯರೊಡನೆ ಪ್ರಾಣಿಗಳ ಬಾಂಧವ್ಯ ಮುಖ್ಯ ಎಂದು ತಿಳಿಸಿದರು.
ಕೃಷಿ ಪ್ರಧಾನ ದೇಶದಲ್ಲಿ ಜಾನುವಾರುಗಳಿಗೆ ಪ್ರಾಮುಖ್ಯತೆ ಕೊಡಬೇಕು. ಕಂದಾಯ ಹಾಗೂ ಪಶುಪಾಲನಾ ಇಲಾಖೆ ಒಂದಕ್ಕೊಂದು ಪೂರಕ. ಅಮೃತ ಮಹಲ್ ಕಾವಲು ಒತ್ತುವರಿಯಾಗುತ್ತಿರುವುದನ್ನು ರಕ್ಷಿಸಬೇಕಿದೆ. ಸೆ.1 ರಿಂದ ಡಿಸೆಂಬರ್‍ವರೆಗೆ ಜಾನುವಾರುಗಳ ಗಣತಿಯನ್ನು ಮಾಡಲು ಅವಕಾಶವಿದೆ. ಒಂದು ಮನೆಯನ್ನು ಬಿಡದೆ ಜಾನುವಾರುಗಳ ಗಣತಿಯಾಗಬೇಕು. ಪಶುಸಂಗೋಪನೆ ರೈತರ ಜೀವನಕ್ಕೆ ಅವಿಭಾಜ್ಯ ಅಂಗವಾಗಿರುವುದರಿಂದ ಎಲ್ಲಿಯೂ ಗೊಂದಲಕ್ಕೆ ಆಸ್ಪದ ಕೊಡದೆ ಗಣತಿ ಮಾಡಿ ಎಂದು ಜಾನುವಾರು ಗಣತಿದಾರರಿಗೆ ಹಾಗೂ ಮೇಲ್ವಿಚಾರಕರುಗಳಿಗೆ ಅಪರ ಜಿಲ್ಲಾಧಿಕಾರಿ ಕರೆ ನೀಡಿದರು.
ಪಶುಪಾಲನಾ ಇಲಾಖೆಯ ಉಪ ನಿರ್ದೇಶಕ ಡಾ.ಎನ್.ಕುಮಾರ್ ಮಾತನಾಡುತ್ತ 1919 ರಲ್ಲಿ ಜಾನುವಾರು ಗಣತಿ ಆರಂಭಗೊಂಡಿದ್ದು, ಪ್ರತಿ ಐದು ವರ್ಷಗಳಿಗೊಮ್ಮೆ ಜಾನುವಾರುಗಳ ಗಣತಿ ಕಾರ್ಯ ನಡೆಯಲಿದೆ. ಗಣತಿ ಆಧಾರದ ಮೇಲೆ ಸರ್ಕಾರ ಬಜೆಟ್ ಸಿದ್ದಪಡಿಸಿ ಯೋಜನೆಗಳನ್ನು ರೂಪಿಸಲು ಸಹಕಾರಿಯಾಗಲಿದೆ. ಗಣತಿಗೆ ನಾಲ್ಕು ತಿಂಗಳ ಅವಧಿಯಿದ್ದು, ನಿಖರತೆಯಿಂದ ಕೂಡಿರಬೇಕು. ಕೃಷಿ ಪ್ರಧಾನವಾದ ಭಾರತದಲ್ಲಿ ಜಾನುವಾರುಗಳ ಅವಶ್ಯಕತೆ ಬಹಳಷ್ಟಿದೆ. ಪ್ರತಿ ಮನೆ ಮನೆಗೆ ಭೇಟಿ ನೀಡಿ ಆಪ್ ಮೂಲಕ ಮಾಹಿತಿ ಸಂಗ್ರಹಿಸಿ ಎಂದು ತಿಳಿಸಿದರು.
ಪಾಲಿ ಕ್ಲಿನಿಕ್ ಉಪನಿರ್ದೇಶಕ ಡಾ.ಹರೀಶ್ ಎಸ್.ಎನ್. ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ತಿಪ್ಪೇಸ್ವಾಮಿ, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಅಂಕಿ ಅಂಶಗಳ ಸಹಾಯಕ ನಿರ್ದೇಶಕಿ ಶ್ರೀಮತಿ ನೂರ್‍ಜಾನ್ ವೇದಿಕೆಯಲ್ಲಿದ್ದರು.