ಮಲ್ಲಿಕಾರ್ಜುನ ಖರ್ಗೆ - ಸತೀಶ್ ಜಾರಕಿಹೊಳಿ ಭೇಟಿ : ಡಿಕೆ ಬ್ರದರ್ಸ್ ಮುಂದಿನ ನಡೆ ಏನು..?
ಬೆಂಗಳೂರು: ಕಾಂಗ್ರೆಸ್ ಪಕ್ಷದಲ್ಲಿಯೇ ಸತೀಶ್ ಜಾರಕಿಹೊಳಿ ನಡೆ ಸಂಚಲನ ಮೂಡಿಸಿದೆ. ಸತೀಶ್ ಜಾರಕಿಹೊಳಿ ಅವರು ಇದ್ದಕ್ಕಿದ್ದ ಹಾಗೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಬಂದಿದ್ದರು. ಈ ಭೇಟಿ ಹಲವು ಕುತೂಹಲಗಳಿಗೆ ಕಾರಣವಾಗಿದೆ. ಮೊದಲೇ ರಾಜ್ಯ ರಾಜಕಾರಣದಲ್ಲಿ ಏನೇನೋ ಸುದ್ದಿ ಸದ್ದು ಮಾಡುತ್ತಿದೆ. ಅದರಲ್ಲೂ ಸಿಎಂ ಬದಲಾವಣೆಯ ವಿಚಾರ ಚರ್ಚೆಗೆ ಬರುತ್ತಲೇ ಇದೆ. ಈ ಬೆನ್ನಲ್ಲೇ ಜಾರಕಿಹೊಳಿ ನಡೆ ಚರ್ಚೆ ಹುಟ್ಟು ಹಾಕಿದ್ದು, ಇದೀಗ ಡಿಕೆ ಬ್ರದರ್ಸ್ ಕೂಡ ದೆಹಲಿಗೆ ಹೋಗಲು ಪ್ಲ್ಯಾನ್ ಮಾಡಿದ್ದಾರೆ.
ಸದ್ಯ ದಸರಾ ಕಾರ್ಯಕ್ರಮಗಳು ನಡೆಯುತ್ತಿವೆ. ಹೀಗಾಗಿ ದಸರಾ ಮುಗಿದ ಮೇಲೆ ದೆಹಲಿಗೆ ಹೋಗುವುದಕ್ಕೆ ಯೋಜನೆ ಹಾಕಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ಒಟ್ಟಾಗಿ ಹೋಗಿ ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಸಿದ್ಧರಾಗಿದ್ದಾರೆ.
ದೆಹಲಿಯಲ್ಲಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ಈಗಾಗಲೇ ಸಮಯವನ್ನು ಕೇಳಿದ್ದಾರಂತೆ. ನಮಗೂ ವರಿಷ್ಠರ ಬೆಂಬಲವಿದೆ, ಮುಕ್ತ ಅವಕಾಶವಿದೆ ಎಂಬ ಸಂದೇಶ ಸಾರುವುದಕ್ಕೆ ಈ ಭೇಟಿ ಮಾಡುವ ಪ್ಲ್ಯಾನ್ ಮಾಡಿದ್ದಾರೆ ಎನ್ನಲಾಗಿದೆ. ಜೊತೆಗೆ ರಾಜ್ಯದ ವಿದ್ಯಮಾನಗಳ ಬಗ್ಗೆ ಹೈಕಮಾಂಡ್ ನಾಯಕರಿಗೆ ಸಂಪೂರ್ಣ ಮಾಹಿತಿ ನೀಡಲು ಭೇಟಿಯಾಗುತ್ತಿದ್ದಾರೆ. ಸತೀಶ್ ಜಾರಕಿಹೊಳಿ ಅವರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾದಾಗ ಹಲವು ವಿಚಾರಗಳು ಚರ್ಚೆಯಾಗಿವೆ ಎನ್ನಲಾಗಿದೆ. ಹೀಗಾಗಿ ರಾಜ್ಯ ರಾಜಕಾರಣದಲ್ಲಿ ಈಗಾಗಲೇ ಸ್ಟ್ರಾಂಗ್ ಎನಿಸಿಕೊಂಡಿರುವ ಡಿಕೆ ಬ್ರದರ್ಸ್, ಹೈಮಾಂಡ್ ಭೇಟಿ ಮಾಡಿ, ರಾಜ್ಯ ರಾಜಕಾರಣದ ವರದಿ ಒಪ್ಪಿಸಲಿದ್ದಾರೆ. ದಸರಾ ಮುಗಿದ ಬಳಿಕ ದೆಹಲಿಯತ್ತ ಪಯಣ ಬೆಳೆಸಲಿದ್ದಾರೆ.