ಸರ್ಕಾರಿ ಗೌರವಗಳೊಂದಿಗೆ ಲೀಲಾವತಿ ಅಂತ್ಯಸಂಸ್ಕಾರ : ಸಿಎಂ ಸಿದ್ದರಾಮಯ್ಯ
ಬೆಂಗಳೂರು: ವಯೋ ಸಹಜ ಕಾಯಿಲೆಯಿಂದ ನಿನ್ನೆ ನಿಧನರಾಗಿದ್ದಾರೆ. ನಿನ್ನೆಯಿಂದ ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿಯೇ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಂದು ಮಧ್ಯಾಹ್ನ ಬೆಂಗಳೂರಿಗೆ ಕರೆತರಲಾಗಿದೆ. ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಸಿಎಂ ಸಿದ್ದರಾಮಯ್ಯ ಅವರು ಲೀಲಾವತಿ ಅವರ ದರ್ಶನ ಪಡೆದಿದ್ದಾರೆ. ಈ ವೇಳೆ ವಿನೋದ್ ರಾಜ್, ಸಿಎಂ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ.
ಅಂತಿಮ ದರ್ಶನದ ಬಳಿಕ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಲೀಲಾವತಿ ಅವರು ಪರಿಪೂರ್ಣ ಕಲಾವಿದೆ. 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ಬಹುಭಾಷಾ ನಟಿ. ಯಾವುದೇ ಪಾತ್ರ ಕೊಟ್ಟರು ಅದಕ್ಕೆ ಜೀವ ತುಂಬುವ ಶಕ್ತಿ ಲೀಲಾವತಿ ಅವರಲ್ಲಿ ಇತ್ತು. ಸರ್ಕಾರಿ ಗೌರವಗಳೊಂದಿಗೆ ಅವರ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಎಷ್ಟೇ ಕಷ್ಟವಿದ್ದರು, ಲೀಲಾವತಿಯವರ ಕುಟುಂಬ ಸರ್ಕಾರದ ಸಹಾಯ ಕೇಳಿರಲಿಲ್ಲ.
ನಾನು ವಿದ್ಯಾರ್ಥಿಯಾಗುದ್ದಾಗ ಅವರ ಸಿನಿಮಾಗಳನ್ನು ನೋಡುತ್ತಿದ್ದೆ. ನಮ್ಮ ಕಾಲದಲ್ಲಿ ರಾಜ್‍ಕುಮಾರ್-ಲೀಲಾವತಿಯವರ ಜೋಡಿ ಜನಪ್ರಿಯವಾಗಿತ್ತು. ವಾರದ ಹಿಂದಷ್ಟೇ ಅವರನ್ನು ಭೇಟಿಯಾಗಿ, ಆರೋಗ್ಯ ವಿಚಾರಿಸಿದ್ದೆ. ಅವರು ನಟಿಸಿದ್ದ ಕುಲವಧು ನನಗೆ ತುಂಬಾ ಇಷ್ಟದ ಸಿನಿಮಾ ಎಂದಿದ್ದಾರೆ.
ಇದೆ ವೇಳೆ ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಲೀಲಾವತಿ ಅವರ ಹೆಸರು ಶಾಶ್ವತವಾಗಿ ಉಳಿಯುವಂತ ಯೋಜನೆಗಳನ್ನು ಜಾರಿಗೆ ತರುತ್ತೇವೆ. ಸ್ಮಾರಕ ವಿಚಾರದಲ್ಲಿ ನಾನೊಬ್ಬನೇ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಆಗುವುದಿಲ್ಲ. ಸರ್ಕಾರದ ಮಟ್ಟದಲ್ಲಿ ಈ ಸಂಬಂಧ ಚರ್ಚೆ ನಡೆಸಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಲೀಲಾವತಿ ಅವರ ಅಂತಿಮ ದರ್ಶನವನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಹಿರಿಯ ನಟ ದ್ವಾರಕೀಶ್, ನಟ ಶಿವರಾಜ್‌ಕುಮಾರ್, ನಟಿಯರಾದ ಪೂಜಾಗಾಂಧಿ, ಸುಧಾರಾಣಿ, ಮಾಳವಿಕಾ ಅವಿನಾಶ್ ಸೇರಿದಂತೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಪಡೆದರು.