ಮಳೆಹಾನಿ ಪ್ರದೇಶಕ್ಕೆ ಕುಮಾರಸ್ವಾಮಿ ಭೇಟಿ : ಸೇನೆಯನ್ನ ಕರೆದುಕೊಂಡು ಹೋಗ್ಬೇಕಿತ್ತು ಅಂದ್ರು ಡಿಕೆಶಿ..!
ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು ಇಂದು ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯದ ಅನೇಕ ಪ್ರದೇಶಗಳಲ್ಲಿ ಜನರು ನೀರಿನಲ್ಲಿ ಮುಳುಗಿ ಹೋಗಿದ್ದಾರೆ. ಮನೆಗಳು ಬಿದ್ದಿವೆ. ಪ್ರಾಣ ಹಾನಿಯಾಗಿದೆ. ಹೀಗಿರುವಾಗ ವಿಡಿಯೋ ಕಾನ್ಫರೆನ್ಸ್ ಮೂಲಕ ಕಂದಾಯ ಸಚಿವರು, ಡಿಸಿಗಳಿಗೆ ಸೂಚನೆ ನೀಡಿದ್ದಾರೆ. ಇಂಥಹ ಸಂದರ್ಭದಲ್ಲಿ ಖುದ್ದು ಸ್ಥಳಕ್ಕ ಸಿಎಂ ಹಾಗೂ ಸಚಿವರು ಭೇಟಿ ನೀಡಬೇಕು. ಆದರೆ ಅದಕ್ಕೆ ಮುಂದಾಗಿಲ್ಲ. ಇದು ಸರ್ಕಾರ ಜನರ ಬಗ್ಗೆ ಎಷ್ಟರಮಟ್ಟಿಗೆ ಕಾಳಜಿ ಹೊಂದಿದೆ ಎಂಬುದನ್ನು ತೋರಿಸುತ್ತದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಹರಿಹಾಯ್ದಿದ್ದರು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿಕೆ ಶಿವಕುಮಾರ್, ಮಳೆ ಹಾನಿ ಹಾಗೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಭೇಟಿ ನೀಡಿದರೆ ಸಾಲದು, ಬದಲಾಗಿ ಅವರು ಸೇನೆಯನ್ನು ಕರೆದುಕೊಂಡು ಹೋಗಬೇಕಿತ್ತು ಎಂದಿದ್ದಾರೆ.
ಅಂಕೋಲಾ ಸೇರಿದಂತೆ ಇತರೆಡೆ ಕುಮಾರಸ್ವಾಮಿ ಅವರು ಭೇಟಿ ನೀಡಿದ್ದು, ಅವರು ಯಾವ ಫೀಲ್ಡಿಗೆ ಇಳಿದಿದ್ದಾರೆ. ಅವರು ಸಿಆರ್ಪಿಎಫ್ ಪಡೆ ಕರೆಸಿ ತೆರವು ಕಾರ್ಯಕ್ಕೆ ನೆರವಾಗಿದ್ದರೆ, ಫೀಲ್ಡಿಗೆ ಇಳಿದಿದ್ದಾರೆ ಎಂದು ಹೇಳಬಹುದಿತ್ತು. ಅನಾಹುತ ನಡೆದ ಒಂದೇ ತಾಸಿನಲ್ಲಿ ನಮ್ಮ ಸಚಿವರನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಮಂಕಾಳ ವೈದ್ಯ ಹಾಗೂ ಕೃಷ್ಣ ಭೈರೇಗೌಡ ಅವರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ, ಅಗತ್ಯ ಕ್ರಮ ಕೈಗೊಂಡಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎಂದು ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದ್ದಾರೆ.