ಭಾಷಣದಲ್ಲಿ ಯಡವಟ್ಟು : ದಿಂಗಾಲೇಶ್ವರ ಸ್ವಾಮೀಜಿ ವಿರುದ್ಧ ಕುಮಾರಸ್ವಾಮಿ ದೂರು.. ಎಫ್ಐಆರ್ ದಾಖಲು..!
ಹುಬ್ಬಳ್ಳಿ: ಧಾರವಾಡ ಲೋಕಸಭಾ ಚುನಾವಣಾ ಕ್ಷೇತ್ರಕ್ಕೆ ಬಿಜೆಪಿ ಅದ್ಯಾವಾಗ ಮತ್ತೆ ಪ್ರಹ್ಲಾದ್ ಜೋಶಿ ಅವರಿಗೇನೆ ಟಿಕೆಟ್ ಕೊಟ್ಟಿತೇ ಅಂದಿನಿಂದಾನೇ ದಿಂಗಾಲೇಶ್ವರ ಸ್ವಾಮೀಜಿಗೆ ಬೇಸರ ಉಂಟಾಗಿತ್ತು. ಅಭ್ಯರ್ಥಿಯನ್ನು ಬದಲಾಯಿಸಿ ಎಂದು ಮನವಿ ಕೂಡ ಅಭ್ಯರ್ಥಿಯ ಬದಲಾವಣೆ ಆಗಲಿಲ್ಲ. ಬಳಿಕ ದಿಂಗಾಲೇಶ್ವರ ಸ್ವಾಮೀಜಿಯೇ ಸ್ಪರ್ಧೆಗೆ ರೆಡಿ ಆದ್ರು, ನಾಮಪತ್ರ ಕೂಡ ಸಲ್ಲಿಕೆ ಮಾಡಿದರು. ಆಮೇಲೆ ವಾಪಾಸ್ ಕೂಡ ಪಡೆದರು. ಇದೀಗ ಅವರ ಮೇಲೆ ಭಾಷಣದ ವೇಳೆ ಮಾಡಿದ ಯಡವಟ್ಟಿನ ಬಗ್ಗೆ ಎಫ್ಐಆರ್ ದಾಖಲಾಗಿದೆ.
ಜಿಲ್ಲೆಯ ನವಲಗುಂದ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೇ 2ರಂದು ನವಲಗುಂದ ತಾಲೂಕು ಮಾರುಕಟ್ಟೆಯಲ್ಲಿ ಸ್ವಾಭಿಮಾನಿ ಮತದಾರರ ಸಮಾವೇಶ ನಡೆದಿತ್ತು. ಈ ವೇಳೆ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ವಿರುದ್ದ ದಿಂಗಾಲೇಶ್ವರ ಸ್ವಾಮೀಜಿ ಪ್ರಮುಖ ಭಾಷಣ ಮಾಡಿದ್ದರು. ಮಾತಿನುದ್ಧಕ್ಕೂ ಜೋಶಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ವಿಭಿನ್ನ ವರ್ಗಗಳ ನಡುವೆ ದ್ವೇಷ ಮತ್ತು ವೈರತ್ವ ತಂದಿಡುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಈ ಕಾರಣಕ್ಕೆ ದೂರು ನೀಡಲಾಗಿದೆ.
ಎಂಜಿನಿಯರಿಂಗ್ ವೃತ್ತಿಯಲ್ಲಿರುವ ಕುರುಬ ಸಮುದಾಯದ ಆರ್. ಕುಮಾರಸ್ವಾಮಿ ಎಂಬುವವರು ಈ ಎಫ್ಐಆರ್ ದಾಖಲಿಸಿದ್ದಾರೆ. 'ಭಸ್ಮ ಹೋಗಿ ಕುಂಕುಮ ಬಂತು. ಭಂಡಾರ ಹೋಗಿ ಕುಂಕುಮ ಬಂತು. ಶರಣು ಶರಣಾರ್ಥಿ ಹೋಗಿ ಹರಿ ಓಂ ಬಂತು' ಎಂದು ಭಾಷಣ ಮಾಡಿದ್ದರು. ಈ ಸಾಲು ವಿವಿಧ ವರ್ಗಗಳ ಸಮುದಾಯಗಳಲ್ಲಿ ದ್ವೇಷ ಮತ್ತು ವೈರತ್ವವನ್ನುಂಟ ಮಾಡುತ್ತದೆ ಎಂದು ಹೇಳಿ ದೂರು ನೀಡಲಾಗಿದೆ. ಹೀಗಾಗಿ ದಿಂಗಾಲೇಶ್ವರ ಸ್ವಾಮೀಜಿ ಮೇಲೆ ಎಫ್ಐಆರ್ ದಾಖಲಾಗಿದೆ.