ನಾಮಪತ್ರ ಸಲ್ಲಿಕೆ ಮಾಡಿದ ಕೆ ಎಸ್ ಈಶ್ವರಪ್ಪ : ಶಕ್ತಿ ಪ್ರದರ್ಶನ ಹೇಗಿತ್ತು ಗೊತ್ತಾ..?
ಶಿವಮೊಗ್ಗ: ಹಲವು ವರ್ಷಗಳಿಂದ ಬಿಜೆಪಿಯಲ್ಲಿಯೇ ರಾಜಕೀಯ ಜೀವನ ನಡೆಸಿದ್ದ ಕೆ ಎಸ್ ಈಶ್ವರಪ್ಪ ಇಂದು ಬಿಜೆಪಿ ವಿರುದ್ಧವೇ ಬಂಡಾಯವೆದ್ದಿದ್ದಾರೆ. ಮಗನಿಗೆ ಟಿಕೆಟ್ ಸಿಗದ ಕಾರಣ, ಅದೇ ಶಿವಮೊಗ್ಗದಿಂದ ಯಡಿಯೂರಪ್ಪ ಪುತ್ರನ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಉಮೇದುದಾರಿಕೆ ಸಲ್ಲಿಕೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ಗಣಪತಿ ದೇವಸ್ಥಾನಕ್ಕರ ಹೋಗಿ ಪೂಜೆ ಸಲ್ಲಿಸಿದ್ದಾರೆ. ಬಳಿಕ ಮೆರವಣಿಗೆಯ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಆದರೆ ಈ ವೇಳೆ ಶಿವಮೊಗ್ಗದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಬೃಹತ್ ಮೆರವಣಿಗೆ ಮಾಡುವ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಈಶ್ವರಪ್ಪ ಅವರಿಗೆ ಬೆಂಬಲಿಗರು ಕೂಡ ಸಾಥ್ ನೀಡಿದ್ದಾರೆ.
ಅಷ್ಟೇ ಅಲ್ಲ ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಸಚಿವ ಗೂಳಿಹಟ್ಟಿ ಶೇಖರ್, ಕುರುಬ ಸಮಾಜದ ಮುಖಂಡ ಮುಕುಪ್ಪ, ಮಾಜಿ ಕಾರ್ಪೋರೇಟರ್ ವಿಶ್ವಾಸ್ ಸೇರಿದಂತೆ ಈಶ್ವರಪ್ಪ ಅವರ ಕುಟುಂಬಸ್ಥರು ಈ ಸಂದರ್ಭದಲ್ಲಿ ಸಾಥ್ ನೀಡಿದ್ದಾರೆ.
ಇನ್ನು ಈಶ್ವರಪ್ಪ ಅವರು ಬಂಡಾಯವೆದ್ದಾಗಿನಿಂದ ಮೋದಿ ಅವರ ಭಾವಚಿತ್ರವನ್ನು ಇಟ್ಟುಕೊಂಡೆ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಇದಕ್ಕೆ ಬಿಜೆಪಿ ನಾಯಕರ ವಿರೋಧವೂ ಇದೆ. ಆದರೆ ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಈಶ್ವರಪ್ಪ ಅವರು, ಇಂದು ಕೂಡ ಮೋದಿ ಅವರ ಭಾವಚಿತ್ರದೊಂದಿಗೆ ಮೆರವಣಿಗೆ ಮಾಡಿದ್ದಾರೆ. ಬೃಹತ್ ಮೆರವಣಿಗೆಯ ವೇಳೆ ಮೋದಿ ಅವರ ಭಾವಚಿತ್ರವನ್ನು ಪ್ರದರ್ಶನ ಮಾಡುತ್ತಾ, ಜಿಲ್ಲಾಧಿಕಾರಿ ಕಚೇರಿಗೆ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.