For the best experience, open
https://m.suddione.com
on your mobile browser.
Advertisement

ಕೌನ್ ಬನೇಗಾ ತೆಲಂಗಾಣ ಸಿಎಂ ?  ಮುಂದುವರಿದ ಕುತೂಹಲ, ಹತಾಶೆಯಲ್ಲಿ ನಾಯಕರು...!

07:12 PM Dec 04, 2023 IST | suddionenews
ಕೌನ್ ಬನೇಗಾ ತೆಲಂಗಾಣ ಸಿಎಂ    ಮುಂದುವರಿದ ಕುತೂಹಲ  ಹತಾಶೆಯಲ್ಲಿ ನಾಯಕರು
Advertisement

Advertisement

ಸುದ್ದಿಒನ್, ಹೈದರಾಬಾದ್ : ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕಾಂಗ್ರೆಸ್ ಪಕ್ಷ ಇಂದು ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಗೆ ಕಸರತ್ತು ಆರಂಭಿಸಿದೆ.

Advertisement

ಹೈದರಾಬಾದ್‌ನ ಹೋಟೆಲ್‌ನಲ್ಲಿ ಸಿಎಲ್‌ಪಿ ಸಭೆ ನಡೆಯಿತು. ಪಕ್ಷದ ಎಲ್ಲಾ ವಿಜೇತ ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.  ಎಐಸಿಸಿ ವೀಕ್ಷಕರ ಸಮ್ಮುಖದಲ್ಲಿ ಸುಮಾರು ಅರ್ಧ ಗಂಟೆ ಕಾಲ ಸಿಎಲ್‌ಪಿ ಸಭೆ ನಡೆಯಿತು.ಎಐಸಿಸಿ ನೇಮಿಸಿದ್ದ ವೀಕ್ಷಕರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರ ಆಯ್ಕೆ ಕುರಿತು ಪಕ್ಷದ ಶಾಸಕರಿಂದ ಅಭಿಪ್ರಾಯ ಪಡೆದರು.

Advertisement

ಸಿಎಲ್ ಪಿ ನಾಯಕರ ಆಯ್ಕೆ ಜವಾಬ್ದಾರಿ ಹೈಕಮಾಂಡ್ ಗೆ ಬಿಟ್ಟದ್ದು ಎಂದು ನಿರ್ಣಯ ಅಂಗೀಕರಿಸಲಾಯಿತು. ಇದಲ್ಲದೇ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ಪಕ್ಷದ ಮುಖಂಡರು ಹಾಗೂ ಪ್ರಮುಖ ನಾಯಕರಿಗೆ ಕೃತಜ್ಞತೆ ಸಲ್ಲಿಸುವ ನಿರ್ಣಯವನ್ನೂ ಅಂಗೀಕರಿಸಲಾಯಿತು. ರೇವಂತ್ ರೆಡ್ಡಿ ಈ ನಿರ್ಣಯಗಳನ್ನು ಮಂಡಿಸಿದರೆ, ತುಮ್ಮಲ ನಾಗೇಶ್ವರ ರಾವ್, ಭಟ್ಟಿ ವಿಕ್ರಮಾರ್ಕ ಮತ್ತಿತರ ಮುಖಂಡರು ಬೆಂಬಲಿಸಿದರು.  ಈ ನಿರ್ಣಯವನ್ನು ವರಿಷ್ಠರಿಗೆ ಕಳುಹಿಸಲಾಗಿದೆ.

Advertisement
Advertisement

ಮತ್ತೊಂದೆಡೆ, ಸಿಎಲ್‌ಪಿ ನಾಯಕರ ಆಯ್ಕೆಯ ಬಗ್ಗೆ ವರಿಷ್ಠರು ಆದಷ್ಟು ಬೇಗ ತನ್ನ ನಿರ್ಧಾರವನ್ನು ಬಹಿರಂಗಪಡಿಸುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಕಾಂಗ್ರೆಸ್ ವರಿಷ್ಠರು ಈ ನಿರೀಕ್ಷೆಯನ್ನು ಹುಸಿಗೊಳಿಸಿದರು.

ತೆಲಂಗಾಣದ ನೂತನ ಸಿಎಂ ಆಗಿ ರೇವಂತ್ ರೆಡ್ಡಿ ಹೆಸರು ಬಹುತೇಕ ಅಂತಿಮಗೊಂಡಿದ್ದು, ಇಂದು ಸಂಜೆ 7 ಗಂಟೆಗೆ ರಾಜಭವನದಲ್ಲಿ ರಾಜ್ಯಪಾಲ ತಮಿಳಿಸೈ ಅವರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ವರದಿಯಾಗಿತ್ತು. ಈ ಸುದ್ದಿಗೆ ಪುಷ್ಟಿ ನೀಡುವಂತೆ ಅಧಿಕಾರಿಗಳು ನೂತನ ಸಿಎಂಗಾಗಿ ರಾಜಭವನದಲ್ಲಿ ಬೆಂಗಾವಲು ಪಡೆಯನ್ನೂ ಸಿದ್ಧಪಡಿಸಿದ್ದರು.
ಇದರೊಂದಿಗೆ ಇಂದು ಸಿಎಂ ಅಭ್ಯರ್ಥಿ ಘೋಷಣೆಯಾಗಲಿದೆ ಎಂದು ಭಾವಿಸಲಾಗಿತ್ತು.

ಮತ್ತೊಂದೆಡೆ ಸೋನಿಯಾ ಗಾಂಧಿ ನಿವಾಸದಲ್ಲಿ ಸಂಸದೀಯ ಕಾರ್ಯತಂತ್ರ ಸಭೆ (Parliamentary strategy meeting)
ನಡೆದಿದೆ. ಈ ಸಭೆಯಲ್ಲಿ ತೆಲಂಗಾಣ ಸಿಎಂ ಅಭ್ಯರ್ಥಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ಭರವಸೆ ವ್ಯಕ್ತಪಡಿಸಿದರು. ಈಗಾಗಲೇ ಗೆದ್ದಿರುವ ಶಾಸಕರ ಅಭಿಪ್ರಾಯ ಸಂಗ್ರಹದ ವರದಿಯನ್ನು ಡಿ.ಕೆ.ಶಿವಕುಮಾರ್ ಅವರು ದೆಹಲಿ ನಾಯಕರಿಗೆ ಕಳುಹಿಸಿದ್ದಾರೆ. ದೆಹಲಿಯಿಂದ ಸಿಎಂ ಅಭ್ಯರ್ಥಿ ಯಾರೆಂದು ಯಾವಾಗ ಘೋಷಣೆಯಾಗಲಿದೆ ಎಂದು ಕಾತರದಿಂದ ಕಾಂಗ್ರೆಸ್ ನಾಯಕರು ಕಾದು ಕುಳಿತಿದ್ದಾರೆ.

ಆದರೆ ನಾಯಕರ ಆಸೆಗೆ ಕಾಂಗ್ರೆಸ್ ತಣ್ಣೀರೆರಚಿದೆ. ನಾಳೆಯವರೆಗೂ ಸಿಎಂ ಅಭ್ಯರ್ಥಿ ಘೋಷಣೆಯ ಸಸ್ಪೆನ್ಸ್ ಮುಂದುವರೆದಿದೆ. ಡಿಕೆ ಶಿವಕುಮಾರ್ ಜೊತೆಗೆ ನಾಲ್ವರು ವೀಕ್ಷಕರೊಂದಿಗೆ ದೆಹಲಿಗೆ ತೆರಳಿದ್ದಾರೆ. ನಾಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಸಿಎಂ ಅಭ್ಯರ್ಥಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ನಂತರ ತೆಲಂಗಾಣ ರಾಜ್ಯದ ನೂತನ ಸಿಎಂ ಅಧಿಕೃತವಾಗಿ ಘೋಷಣೆಯಾಗಲಿದೆ.  ಅದೇನೇ ಇರಲಿ ನಾಳೆ ಘೋಷಣೆಯಾದ ನಂತರವೂ ಪ್ರಮಾಣ ವಚನ ಯಾವಾಗ ನಡೆಯಲಿದೆ ಎಂಬುದು ತಿಳಿಯಬೇಕಿದೆ.

ಇಂದು ಸಂಜೆ ವೇಳೆಗೆ ಸಿಎಂ ಅಭ್ಯರ್ಥಿ ಘೋಷಣೆಯಾಗಲಿದೆ ಎಂಬ ಕುತೂಹಲ ಎಲ್ಲೆಡೆ ವ್ಯಕ್ತವಾಗಿತ್ತು, ಆದರೆ ಇದೀಗ ನಾಳೆಗೆ ಮುಂದೂಡಿಕೆ ಹಿಂದಿನ ಕಾರಣಗಳು ಚರ್ಚೆಗೆ ಗ್ರಾಸವಾಗಿವೆ. ಸಿಎಲ್‌ಪಿ ನಾಯಕನ ವಿಚಾರದಲ್ಲಿ ಶಾಸಕರ ಒಮ್ಮತದ ಕೊರತೆಯೇ ಅಥವಾ ನಾಯಕರು ಕಳುಹಿಸಿದ ಹೆಸರು ಸ್ವತಃ ನಾಯಕರಿಗೇ ಇಷ್ಟವಾಗುತ್ತಿಲ್ಲವೇ ಎಂಬ ಕುತೂಹಲದ ಚರ್ಚೆ ಈಗ ನಡೆಯುತ್ತಿದೆ. ತೆಲಂಗಾಣದ ನೂತನ ಸಿಎಂ ಯಾರು ಎಂದು ನಾಳೆಯಾದರೂ  ಘೋಷಿಸುತ್ತಾರೋ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.

Advertisement
Tags :
Advertisement