ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ : 18 ಕಡೆ ಚೆಕ್ ಪೋಸ್ಟ್ ನಿರ್ಮಾಣ ಮಾಡಿದ್ದೇಕೆ..?
ಬೆಳಗಾವಿ: ಇಂದು 68ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ. ನಾಡಿನೆಲ್ಲೆಡೆ ಸಂಭ್ರಮದಿಂದ ರಾಜ್ಯೋತ್ಸವ ಆಚರಿಸಿ, ಕನ್ನಡಾಂಭೆಗೆ ಜೈ ಎಂದಿದ್ದಾರೆ. ಬೆಳಗಾವಿ ಜಿಲ್ಲೆ ಮಧುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಬೀದಿ ಬೀದಿಗಳಲ್ಲೂ ಕನ್ನಡದ ಕಂಪು ಸೂಸುವ ಬ್ಯಾನರ್ ಅಳವಡಿಸಲಾಗಿದೆ. ಇದರ ಜೊತೆಗೆ 18 ಕಡೆ ಚೆಕ್‌ಪೋಸ್ಟ್ ನಿರ್ಮಾಣ ಮಾಡಲಾಗಿದೆ.
ಚನ್ನಮ್ಮ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ತಯಾರಿ ನಡೆದಿದ್ದು, ಐದು ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸೇರುವ ನಿರೀಕ್ಷೆ ಇದೆ. ರಾಜ್ಯೋತ್ಸವದ ತಯಾರಿಯನ್ನು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಮಹಾನಗರ ಪಾಲಿಕೆ ಆಯುಕ್ತ ಅಶೋಕ್ ದುಡಗುಂಟಿ ವೀಕ್ಷಿಸಿ ರಾಜ್ಯೋತ್ಸವಕ್ಕೆ ಸಕಲ ರೀತಿ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ. ಆಯುಕ್ತರ ನೇತೃತ್ವದಲ್ಲಿ 2 ಡಿಸಿಪಿ, 12 ಡಿವೈಎಸ್‌ಪಿ, 120ಕ್ಕೂ ಹೆಚ್ಚು ಪಿಐ, 300 ಜನ ಪಿಎಸ್‌ಐ, 2,000 ಪೊಲೀಸ್ ಸಿಬ್ಬಂದಿ, 500 ಹೋಮ್ ಗಾರ್ಡ್ ಅನ್ನು ಭದ್ರತೆ ದೃಷ್ಟಿಯಿಂದ ನಿಯೋಜನೆ ಮಾಡಲಾಗಿದೆ. ಮಾರ್ಗದುದ್ದಕ್ಕೂ 300 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಿದ್ದರೆ, ಅತ್ತ ಎಂಇಎಸ್ ಪುಂಡರಿಂದ ಕರಾಳ ದಿನದ ಆಚರಣೆಯಾಗುತ್ತಿದೆ. ಆದರೆ ಇದಕ್ಕೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಹೀಗಾಗಿ ಮಹಾರಾಷ್ಟ್ರದ ಸಂಸದರು, ಸಚಿವರು ಗಡಿ ಪ್ರವೇಶ ಮಾಡದಂತೆ ನಿಷೇಧ ಹೇರಲಾಗಿದೆ. ಜದರ ಭಾಗವಾಗಿಯೇ 18 ಕಡೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣ ಮಾಡಲಾಗಿದೆ. ಈ ಮೂಲಕ ಬೆಳಗಾವಿಗೆ ಪ್ರವೇಶ ಪಡೆಯದಂತೆ ಎಚ್ಚರಿಕೆ ವಹಿಸಲಾಗಿದೆ.