Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

Kamala Harris: ಅಮೇರಿಕಾ ಅಧ್ಯಕ್ಷ ಸ್ಥಾನದ ಸನಿಹದಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್..!

02:00 PM Jul 07, 2024 IST | suddionenews
Advertisement

ಸುದ್ದಿಒನ್ : ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಕಾವು ಜೋರಾಗಿದೆ. ಅಧ್ಯಕ್ಷೀಯ ರೇಸ್‌ಗೆ ಅಂತಿಮವಾಗಿ ಯಾರು ನಿಲ್ಲುತ್ತಾರೆ ಮತ್ತು ಯಾರು ಯಾರನ್ನು ಎದುರಿಸುತ್ತಾರೆ ಎಂಬ ವಿಷಯ ತೀವ್ರ ಕುತೂಹಲ ಮೂಡಿಸಿದೆ.

Advertisement

ಪ್ರಸ್ತುತ ಡೆಮಾಕ್ರಟಿಕ್ ಪಕ್ಷದಿಂದ ಆ ದೇಶದ ಹಾಲಿ ಅಧ್ಯಕ್ಷ ಜೋ ಬಿಡನ್ ಹಾಗೂ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಕಣದಲ್ಲಿ ನಿಂತಿದ್ದಾರೆ. ಇಬ್ಬರೂ ಚುನಾವಣಾ ಪ್ರಚಾರವನ್ನೂ ಆರಂಭಿಸಿದ್ದಾರೆ. ಆದರೆ ಇದೀಗ ಇದ್ದಕ್ಕಿದ್ದಂತೆ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅವರ ಹೆಸರು ಮುನ್ನೆಲೆಗೆ ಬಂದಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡನ್ ಬದಲಿಗೆ ಕಮಲಾ ಹ್ಯಾರಿಸ್ ಅವರನ್ನು ಕಣಕ್ಕಿಳಿಸಲು ಡೆಮಾಕ್ರಟಿಕ್ ಪಕ್ಷ ತಯಾರಿ ನಡೆಸುತ್ತಿದೆ ಎಂದು ಅಮೆರಿಕದ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಿದೆ.

ನವೆಂಬರ್ 5, 2024 ರಂದು ಅಮೆರಿಕದಲ್ಲಿ ನಡೆಯಲಿರುವ ಅಧ್ಯಕ್ಷೀಯ ಚುನಾವಣೆಗೆ ದೇಶವೊಂದೇ ಅಲ್ಲ, ಇಡೀ ವಿಶ್ವವೇ ಕುತೂಹಲದಿಂದ ಕಾಯುತ್ತಿದೆ. ಅಮೆರಿಕದ ಇತಿಹಾಸದಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಈ ಬಾರಿಯ ಅಧ್ಯಕ್ಷೀಯ ಚುನಾವಣೆ ಅತ್ಯಂತ ವರ್ಣರಂಜಿತವಾಗಿ ನಡೆಯಲಿದೆ. ಅಧ್ಯಕ್ಷೀಯ ರೇಸ್ ನಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಕಣಕ್ಕಿಳಿಯುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿರುವ ಹಿನ್ನಲೆಯಲ್ಲಿ ಇದು ಮತ್ತಷ್ಟು ಕುತೂಹಲ ಮೂಡಿಸಿದೆ. ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಮುಖಾಮುಖಿಯಾದರೆ ಅಧ್ಯಕ್ಷೀಯ ಚುನಾವಣೆ ತೀವ್ರ ಪೈಪೋಟಿ ಸಾಧ್ಯತೆ ಇದೆ. ಭಾರತೀಯ ಮೂಲದ ಮಹಿಳೆ ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಟಿಕ್ ಅಭ್ಯರ್ಥಿ ಎಂದು ಘೋಷಿಸಿದರೆ ಅಧ್ಯಕ್ಷೀಯ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂದು ಕೆಲವು ರಾಜಕೀಯ ತಜ್ಞರು ವಿಶ್ಲೇಷಿಸುತ್ತಿದ್ದಾರೆ.

Advertisement

ಬಿಡೆನ್ ನಿಲ್ಲದಿದ್ದರೆ ಕಮಲಾಗೆ ಅವಕಾಶ..

ಇತ್ತೀಚೆಗೆ ನಡೆದ ಅಧ್ಯಕ್ಷೀಯ ಚರ್ಚೆಯಲ್ಲಿ ಅಧ್ಯಕ್ಷ ಬಿಡೆನ್ ಗೆ ಹಿನ್ನಡೆಯಾಗಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲುಗೈ ಸಾಧಿಸಿದ್ದರು.  ಬಿಡೆನ್ ಅವರು ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದಾರೆ ಎಂದು ಹೇಳುವ ಮೂಲಕ ಅಧ್ಯಕ್ಷೀಯ ಸ್ಪರ್ಧೆಯಿಂದ ಹೊರಗುಳಿಯುವಂತೆ ರಿಪಬ್ಲಿಕನ್ ಪಕ್ಷದವರು
ಸಲಹೆ ನೀಡುತ್ತಿದ್ದಾರೆ. ಡೆಮಾಕ್ರಟಿಕ್ ಪಕ್ಷದಿಂದ ಬಿಡೆನ್ ಬದಲು ಬೇರೆಯವರಿಗೆ ಅವಕಾಶ ನೀಡುವುದು ಒಳಿತು ಎಂಬುದು ಸ್ವಂತ ಪಕ್ಷದ ಮುಖಂಡರ ಅಭಿಪ್ರಾಯವಾಗಿದೆ.

ಇದರೊಂದಿಗೆ ಬಿಡೆನ್ ಬದಲಿಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅಧ್ಯಕ್ಷೀಯ ರೇಸ್ ನಲ್ಲಿ ನಿಲ್ಲುವ ಅವಕಾಶವಿದೆ ಎಂಬ ಪ್ರಚಾರವೂ ಜೋರಾಗಿದೆ. ಬಿಡೆನ್ ಅಧ್ಯಕ್ಷೀಯ ರೇಸ್ ನಲ್ಲಿ ಇರುವುದಾಗಿ ಹೇಳುತ್ತಿದ್ದರೂ ಯಾವುದೇ ಕ್ಷಣದಲ್ಲಿ ಈ ವಿಚಾರದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆಯಂತೆ. ಬಿಡೆನ್ ಅಧ್ಯಕ್ಷೀಯ ರೇಸ್‌ನಿಂದ ಹಿಂದೆ ಸರಿದರೆ, ಪ್ರಸ್ತುತ ದೇಶದ ಉಪಾಧ್ಯಕ್ಷರಾಗಿರುವ ಕಮಲಾ ಹ್ಯಾರಿಸ್‌ಗೆ ಆ ಅವಕಾಶ ಸಿಗುವ ಸಾಧ್ಯತೆಯಿದೆ.

ಅದಕ್ಕೇ ಈಗ ಇಡೀ ಜಗತ್ತೇ ಕಮಲಾ ಹ್ಯಾರಿಸ್ ಕಡೆ ನೋಡುತ್ತಿದೆ. ಅದಕ್ಕಿಂತ ಮುಖ್ಯವಾಗಿ ಅವರು ಅಧ್ಯಕ್ಷೀಯ ಚುನಾವಣಾ ಕಣದಲ್ಲಿ ನಿಲ್ಲುವ ಅವಕಾಶವಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಇತ್ತ ಭಾರತದಲ್ಲೂ ಈ ಕುರಿತು ಬಾರಿ ಚರ್ಚೆ ನಡೆಯುತ್ತಿದೆ. ಇದಕ್ಕೆ ಕಾರಣ ದಿ ಮೋಸ್ಟ್ ಪವರ್ ಫುಲ್ ವುಮನ್ ಕಮಲಾ ಹ್ಯಾರಿಸ್ ಭಾರತೀಯ ಮೂಲದ ಮಹಿಳೆ. ಭಾರತೀಯ ಮೂಲದ ಮಹಿಳೆಯೊಬ್ಬರು ವಿಶ್ವದ ಅಗ್ರ ರಾಷ್ಟ್ರ ಅಮೆರಿಕದ ಅಧ್ಯಕ್ಷ ಸ್ಥಾನವನ್ನು  ಸಮೀಪಿಸುತ್ತಿರುವುದು 130 ಕೋಟಿ ಭಾರತೀಯರಿಗೆ ಹೆಮ್ಮೆಯ ಸಂಗತಿ. ಮೂರೂವರೆ ವರ್ಷಗಳ ಹಿಂದೆ ಅಮೆರಿಕದ ಉಪಾಧ್ಯಕ್ಷೆಯಾಗಿ ಪ್ರಮಾಣ ವಚನ ಸ್ವೀಕರಿಸಿದಾಗಲೂ ಭಾರತೀಯರ ಹೃದಯ ಹೆಮ್ಮೆಯಿಂದ ಬೀಗುತ್ತಿತ್ತು. ಈಗ ಆಕೆ ಆ ದೇಶದ ಅಧ್ಯಕ್ಷ ಹುದ್ದೆಗೆ ಹತ್ತಿರವಾಗಿರುವುದರಿಂದ ಭಾರತೀಯರೆಲ್ಲ ಅವರತ್ತ ನೋಡುತ್ತಿದ್ದಾರೆ.

ಅಮೇರಿಕಾದ ರಾಜಕೀಯ ಇತಿಹಾಸದಲ್ಲಿ ಯಾವುದೇ ಮಹಿಳೆ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿಲ್ಲ. ಕಮಲಾ ಹ್ಯಾರಿಸ್ ಅಮೆರಿಕದ ಇತಿಹಾಸದಲ್ಲಿ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಮಹಿಳೆ. 1984 ರಲ್ಲಿ ಡೆಮೋಕ್ರಾಟ್ ಪಕ್ಷದ ಜೆರಾಲ್ಡಿನ್ ಫೆರಾರೊ ಮತ್ತು 2008 ರಲ್ಲಿ ರಿಪಬ್ಲಿಕನ್ ಪಕ್ಷದ ಸಾರಾ ಪಾಲಿನ್ ಅವರು ಉಪಾಧ್ಯಕ್ಷರ ಚುನಾವಣೆಯ ಸ್ಪರ್ಧೆಯಲ್ಲಿದ್ದರು. ಆದರೆ ಪಕ್ಷಗಳ ಸೋಲಿನಿಂದ ಅವರು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. 2020 ರಲ್ಲಿ ನಡೆದ ಉಪಾಧ್ಯಕ್ಷರ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ಎಷ್ಟೇ ಅಡೆತಡೆಗಳು, ಟೀಕೆಗಳು ಎದುರಾದರೂ ತಮ್ಮ ಪ್ರತಿಭೆಯಿಂದ ಸೂಪರ್ ಪವರ್ ದೇಶದ ಉಪಾಧ್ಯಕ್ಷರಾದರು. ಜೀವನದಲ್ಲಿ ಹಲವು ಏಳುಬೀಳುಗಳನ್ನು ಎದುರಿಸಿರುವ ಕಮಲಾ ಹ್ಯಾರಿಸ್ ಮುಂದಿನ ಅಧ್ಯಕ್ಷ ಅಭ್ಯರ್ಥಿಯಾಗಿ ನಿಲ್ಲುವ ಸಾಧ್ಯತೆ ಇದೆ ಎಂದು ಕೆಲ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ. ಇದೀಗ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಮಲಾ ಹೆಸರು ಅಂತಿಮಗೊಂಡರೆ, ಡೊನಾಲ್ಡ್ ಟ್ರಂಪ್ ಗೆ ತೀವ್ರ ಪೈಪೋಟಿ ಎದುರಾಗಲಿದೆ ಎಂದು ಆ ದೇಶದ ಮಾಧ್ಯಮ ಮೂಲಗಳು ವಿಶ್ಲೇಷಿಸುತ್ತಿವೆ.

ಕಮಲಾ ಹ್ಯಾರಿಸ್ ಭಾರತೀಯ ಮೂಲದವರು..

ಕಮಲಾ ಹ್ಯಾರಿಸ್ ಭಾರತೀಯ-ಜಮೈಕಾದ ಪರಂಪರೆಯನ್ನು ಹೊಂದಿದ್ದಾರೆ. ಕಮಲಾ ಅವರ ತಾಯಿ ಶ್ಯಾಮಲಾ ಗೋಪಾಲನ್ ಚೆನ್ನೈ ಮೂಲದವರು. ಪೌಷ್ಟಿಕತಜ್ಞರಾದ ಶ್ಯಾಮಲಾ ಗೋಪಾಲನ್ ಅವರು ಎಂಡೊಕ್ರೈನಾಲಜಿ (ಅಂತಃಸ್ರಾವಶಾಸ್ತ್ರ) ಸಂಶೋಧನೆಗಾಗಿ ಅಮೆರಿಕಕ್ಕೆ ತೆರಳಿದರು.  ಮತ್ತು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಭೇಟಿಯಾದ ಡೊನಾಲ್ಡ್ ಹ್ಯಾರಿಸ್ ಅವರನ್ನು ಮದುವೆಯಾಗಿ ಅಲ್ಲೇ ನೆಲೆಸಿದರು. ಡೊನಾಲ್ಡ್ ಹ್ಯಾರಿಸ್ ಜಮೈಕಾ ಮೂಲದವರು. ಅಕ್ಟೋಬರ್ 20, 1964 ರಂದು ಅವರಿಗೆ ಜನಿಸಿದ ಕಮಲಾ ಅವರು ವಕೀಲರಾಗಿ ಮುಂದುವರೆದರು. 2003 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಡಿಸ್ಟ್ರಿಕ್ಟ್ ಅಟಾರ್ನಿಯಾಗಿ ಯಶಸ್ವಿಯಾದರು. 2016 ರಲ್ಲಿ, ಅವರು ಕ್ಯಾಲಿಫೋರ್ನಿಯಾದಿಂದ ಸ್ಪರ್ಧಿಸಿದರು ಮತ್ತು ಸೆನೆಟರ್ ಆಗಿ ಆಯ್ಕೆಯಾದರು. ಅವರು 2020 ರಲ್ಲಿ ಅಮೆರಿಕದ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ತಮಿಳುನಾಡಿನ ಕಮಲಾ ಹ್ಯಾರಿಸ್ ಅವರ ಅಜ್ಜಿ, ತಾತ ಎಲ್ಲರೂ ಪ್ರಗತಿಪರರು. ಅಜ್ಜ ಪಿವಿ ಗೋಪಾಲನ್ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಅವರು ರಾಜತಾಂತ್ರಿಕರಾಗಿಯೂ ಕೆಲಸ ಮಾಡಿದ್ದರು. ಅಜ್ಜಿ ಶಾಶ್ವತವಾಗಿ ಕುಟುಂಬ ಯೋಜನೆಗಾಗಿ ಮಹಿಳೆಯರಿಗಾಗಿ ಪ್ರಚಾರ ಮಾಡಿದ್ದರು. ಕಮಲಾ ಅವರು ಚಿಕ್ಕಂದಿನಲ್ಲಿ ಆಗಾಗ ಚೆನ್ನೈಗೆ ಬರುತ್ತಿದ್ದ ಕಾರಣ ಅವರ ಅಜ್ಜ ಪಿ.ವಿ.ಗೋಪಾಲನ್ ಅವರ ಪ್ರಭಾವ ಅವರ ಮೇಲಿತ್ತು ಎನ್ನುತ್ತಾರೆ ಆಕೆಯ ಸಂಬಂಧಿಕರು. ಈ ಹಿಂದೆ ಕಮಲಾ ಅವರು ತಮ್ಮ ಬಾಲ್ಯದಲ್ಲಿ ಚೆನ್ನೈ ಬೀಚ್‌ನಲ್ಲಿ ಅಜ್ಜನ ಜೊತೆ ಕಳೆದ ಕ್ಷಣಗಳು ಅವಿಸ್ಮರಣೀಯ ಎಂದು ಒಂದು ಸಂದರ್ಭದಲ್ಲಿ ಉಲ್ಲೇಖಿಸಿದ್ದಾರೆ.

ಕಮಲಾ ಅವರ ಆತ್ಮಚರಿತ್ರೆಯ ಪುಸ್ತಕ 'ದ ಟ್ರೂತ್ಸ್ ವಿ ಹೋಲ್ಡ್' 2018 ರಲ್ಲಿ ಬಿಡುಗಡೆಯಾಯಿತು. ಅದರಲ್ಲಿ "ಕಮಲ ಎಂದರೆ ಕಮಲದ ಹೂವು". ಭಾರತೀಯ ಸಂಸ್ಕೃತಿಯಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ. ಹೂವು  ಕೊಳದಲ್ಲಿ ತೇಲುತ್ತಿರುವಂತೆ ಕಾಣುತ್ತದೆ. ಆದರೆ, ಅದರ ಬೇರುಗಳು ಕೊಳದ ಕೆಳಭಾಗದಲ್ಲಿ ದೃಢವಾಗಿ ಬೇರೂರಿರುತ್ತವೆ,'' ಎಂದು ಪುಸ್ತಕದಲ್ಲಿ ತನ್ನ ಹೆಸರಿನ ಬಗ್ಗೆ ಅಮೆರಿಕನ್ನರಿಗೆ ವಿವರಿಸಿದ್ದರು. ಮೇಲಾಗಿ ಅವರಿಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನೂ ಆ ಪುಸ್ತಕದಲ್ಲಿ ಬರೆದುಕೊಂಡಿದ್ದರು.

ಕಮಲಾಗೆ ಮಾಯಾ ಎಂಬ ತಂಗಿ ಇದ್ದಾರೆ. ಬಾಲ್ಯದಲ್ಲಿ, ಕಪ್ಪು ಅಮೇರಿಕನ್ ಗಾಯಕರ ಸಂಗೀತ ಯಾವಾಗಲೂ ಅವರ ಮನೆಯಲ್ಲಿ ಕೇಳುತ್ತಿತ್ತು. ಕಮಲಾ ಅವರು ತಂಗಿ ಮಾಯಾಳ ಬಗ್ಗೆ ಅಪಾರ ಪ್ರೀತಿ. ಕಮಲಾ ಅವರು ಐದು ವರ್ಷದವಳಿದ್ದಾಗ, ಆಕೆಯ ಪೋಷಕರು ಬೇರ್ಪಟ್ಟರು. ಕಮಲಾ ಮತ್ತು ಮಾಯಾ ಅವರನ್ನು ಅವರ ತಾಯಿ ಬೆಳೆಸಿದರು. ಕಮಲಾ ಅವರ ತಾಯಿ ಶ್ಯಾಮಲಾ 2009 ರಲ್ಲಿ ನಿಧನರಾದರು. ಆಗ ಆಕೆಗೆ 70 ವರ್ಷ.

ಕಮಲಾ ಅವರು ಓದಿದ್ದು ಹೊವಾರ್ಡ್ ವಿಶ್ವವಿದ್ಯಾಲಯದಲ್ಲಿ. ಇದು ಅಮೆರಿಕದಲ್ಲಿ ಅತಿ ಹೆಚ್ಚು ಕಪ್ಪು ವಿದ್ಯಾರ್ಥಿಗಳನ್ನು ಹೊಂದಿರುವ ವಿಶ್ವವಿದ್ಯಾಲಯಗಳಲ್ಲಿ ಒಂದಾಗಿದೆ. ಕಾಲೇಜು ಜೀವನವು ತನ್ನ ಜೀವನದಲ್ಲಿ ಅತ್ಯಂತ ಪ್ರಭಾವಶಾಲಿ ಅನುಭವಗಳಲ್ಲಿ ಒಂದಾಗಿದೆ ಎಂದು ಅವರು ಹೇಳುತ್ತಾರೆ. ಕಮಲ ಹ್ಯಾರಿಸ್ ಕಾನೂನು ಪದವಿ ಪಡೆದರು. 2003 ರಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಸಿಟಿ ಅಟಾರ್ನಿಯಾಗಿ ಸೇವೆ ಸಲ್ಲಿಸಿದರು. ನಂತರ 2016 ರಲ್ಲಿ ಅವರು ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿ ಮುಂದುವರೆದರು. ಕಮಲಾ ಹ್ಯಾರಿಸ್ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ, ಮೊದಲ ಆಫ್ರಿಕನ್ ಅಮೇರಿಕನ್ ಮತ್ತು ಮೊದಲ ಏಷ್ಯನ್ ಅಮೇರಿಕನ್. ತನ್ನ ವಾಕ್ಚಾತುರ್ಯ, ಸಂಭಾಷಣಾ ಚಾತುರ್ಯ ಮತ್ತು ಅಪಾರ ಬುದ್ದಿ ಕೌಶಲ್ಯದಿಂದ ಅತಿ ಕಡಿಮೆ ಸಮಯದಲ್ಲಿ ರಾಷ್ಟ್ರ ಮಟ್ಟದ ಜನಪ್ರಿಯ ನಾಯಕಿಯಾದರು.

ಕಮಲಾ ಮೊದಲಿನಿಂದಲೂ ಅಮೆರಿಕದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು ಎಂಬ ದನಿಯನ್ನು ಎತ್ತುತ್ತಿದ್ದಾರೆ. ಕಮಲಾ ಅವರು ಕಪ್ಪು ಜನರ ಸಮಸ್ಯೆಗಳು, ದಕ್ಷಿಣ ಏಷ್ಯಾದ ಸಮಸ್ಯೆಗಳು ಮತ್ತು ವಲಸಿಗರ ಸಮಸ್ಯೆಗಳನ್ನು ತಿಳಿದಿರುವ ವ್ಯಕ್ತಿಯಾಗಿ ರಾಜಕೀಯ ವಲಯದಲ್ಲಿ ಗುರುತಿಸಲ್ಪಟ್ಟಿದ್ದಾರೆ. ಅವರು ಮಹಿಳೆಯರು ಮತ್ತು ಕಡಿಮೆ ಆದಾಯದ ಗುಂಪುಗಳ ಪ್ರತಿನಿಧಿ ಎಂದೂ ಕರೆಯುತ್ತಾರೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯರ ಆಸಕ್ತಿ

ಭಾರತೀಯ ಮೂಲದ ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷೀಯ ರೇಸ್ ನಲ್ಲಿ ನಿಂತಿರುವುದು ಇಡೀ ದೇಶದ ಜನರಲ್ಲಿ ಆತಂಕ ಮೂಡಿಸಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ಆಸಕ್ತಿಯನ್ನು ಭಾರತದಲ್ಲಿ ಮೂಡಿಸುತ್ತಿದೆ. ಕಮಲಾ ಹ್ಯಾರಿಸ್ ಅಧ್ಯಕ್ಷೀಯ ರೇಸ್ ನಲ್ಲಿ ನಿಲ್ಲುತ್ತಾರೆ ಎಂಬ ಸುದ್ದಿಯಿಂದ ಮಹಿಳೆಯರು, ಇಂಡೋ-ಅಮೆರಿಕನ್ನರು, ಎನ್ ಆರ್ ಐಗಳು ಭಾರತ ಮಾತ್ರವಲ್ಲದೆ ಜಮೈಕಾದಲ್ಲೂ ಕುತೂಹಲ ಮೂಡಿಸಿದೆ. ಕಾರಣ- ಕಮಲಾ ಹ್ಯಾರಿಸ್ ಆ ದೇಶದಲ್ಲೂ ಬೇರು ಬಿಟ್ಟಿದ್ದಾರೆ. ಕಮಲಾ ಅವರ ತಾಯಿ ಭಾರತೀಯರು ಮತ್ತು ಅವರ ತಂದೆ ಜಮೈಕಾದವರು. ಆದ್ದರಿಂದಲೇ ಕಮಲಾ ಒಂದು ಕಡೆ ಏಷ್ಯನ್, ಇನ್ನೊಂದು ಕಡೆ ಆಫ್ರಿಕನ್ ಎಂದು ಗುರುತಿಸಿಕೊಂಡಿದ್ದಾರೆ. ಹಾಗಾದರೆ ನಿಮ್ಮನ್ನು ನೀವು ಯಾವ ದೇಶ ಎಂದು ಕರೆಯಲು ಬಯಸುತ್ತೀರಿ ಎಂದು ಕೇಳಿದರೆ ನನ್ನ ಬೇರುಗಳ ಬಗ್ಗೆ ಹೆಮ್ಮೆಪಡುತ್ತಲೇ ನಾನು ಅಮೇರಿಕನ್ ಆಗಬೇಕೆಂದು ಬಯಸುತ್ತೇನೆ ಎನ್ನುತ್ತಾರೆ. ಸದ್ಯದ ಚುನಾವಣೆಯಲ್ಲಿ ಕಮಲಾ ಅವರಿಗೆ ಈ ಎಲ್ಲ ಅಂಶಗಳು ಕೂಡಿ ಬಂದಿವೆ ಎಂದು ರಾಜಕೀಯ ವಿಶ್ಲೇಷಕರು ಭವಿಷ್ಯ ನುಡಿಯುತ್ತಿದ್ದಾರೆ.

ಕಮಲಾ ಅವರು ಅಮೇರಿಕಾ ಅಧ್ಯಕ್ಷರಾದರೆ ಭಾರತದೊಂದಿಗೆ ಅವರ ಬಾಂಧವ್ಯ ಹೇಗಿರುತ್ತದೆ ಎಂಬುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಆದಾಗ್ಯೂ, ಕಮಲಾ ಹ್ಯಾರಿಸ್ ಈ ಹಿಂದೆ ಕಾಶ್ಮೀರ ಮತ್ತು 370 ನೇ ವಿಧಿ ಕುರಿತ ಭಾರತ ಸರ್ಕಾರದ ನೀತಿಗಳನ್ನು ಟೀಕಿಸಿದ್ದರು. ಕಾಶ್ಮೀರದ ಜನರು ಒಬ್ಬಂಟಿಯಲ್ಲ, ನಾವು ಅವರ ಪರವಾಗಿ ನಿಲ್ಲುತ್ತೇವೆ ಎಂಬ ಅಂದಿನ ಹೇಳಿಕೆಗಳು ಟೀಕೆಗೆ ಕಾರಣವಾಗಿತ್ತು. ಅನೇಕ ಭಾರತೀಯರೂ ಕಮಲ ಹ್ಯಾರಿಸ್ ಭಾಷಣವನ್ನು ಟೀಕಿಸಿದ್ದರು.

ಈ ಹಿಂದೆ, ಕಮಲಾ ಹ್ಯಾರಿಸ್‌ನಷ್ಟು ಸಮರ್ಥ ಮಹಿಳೆಯನ್ನು ನಾನು ನೋಡಿಲ್ಲ ಎಂದು ಬಿಡೆನ್ ಹೇಳಿದ್ದರು. ಆಕೆ ಎಂತಹುದೇ ಸಂದರ್ಭದಲ್ಲಿಯೂ ನಿರ್ಭಯವಾಗಿ ಹೋರಾಡುವ ಯೋಧೆ.  ದೇಶದ ಅತ್ಯುತ್ತಮ ಜನಸೇವಕಿ ಎಂದು ಹೊಗಳಿದ್ದರು. ಕಮಲಾ ಅವರನ್ನು ಅಧ್ಯಕ್ಷೀಯ ರೇಸ್‌ಗೆ ಇಳಿಸಿದರೆ ಕಪ್ಪು ಜನಾಂಗದವರ ಮತಗಳು, ಏಷ್ಯಾದ ಮತಗಳು ಮತ್ತು ಮಹಿಳೆಯರ ಮತಗಳು ತಮ್ಮ ಪಕ್ಷಕ್ಕೆ ಬರುತ್ತವೆ ಎಂದು ಡೆಮಾಕ್ರಟಿಕ್ ಪಕ್ಷದ ನಾಯಕರು ಲೆಕ್ಕಾಚಾರ ಹಾಕುತ್ತಿದ್ದಾರೆ.

ತಮಿಳುನಾಡಿನಲ್ಲಿ ಕಮಲಾ ಬ್ಯಾನರ್, ಕಟೌಟ್...

ಕಮಲಾ ಹ್ಯಾರಿಸ್ ಅಮೆರಿಕದ ಉಪಾಧ್ಯಕ್ಷ ಸ್ಥಾನಕ್ಕೇರಿದಾಗ ತಮಿಳುನಾಡಿನಲ್ಲಿ ಕಮಲಾ ಹ್ಯಾರಿಸ್ ಹೆಸರು ಬಹಳಾ ಜನಪ್ರಿಯವಾಗಿತ್ತು. ಆಕೆಯ ತಾಯಿ ಶ್ಯಾಮಲಾ ಗೋಪಾಲನ್ ಅವರ ಹುಟ್ಟೂರಾದ  ತಿರುವರೂರಿನಲ್ಲಿ ಸ್ಥಳೀಯರು ಬ್ಯಾನರ್ ಮತ್ತು ಕಟೌಟ್‌ಗಳನ್ನು ಹಾಕಿ ಸಂಭ್ರಮಿಸಿದ್ದರು. ಮತ್ತು ಆ ಚುನಾವಣೆಯಲ್ಲಿ ಕಮಲಾ ಅವರು ಗೆಲ್ಲುವಂತೆ ಸ್ಥಳೀಯರು ವಿಶೇಷ ಪೂಜೆಗಳನ್ನೂ ಸಲ್ಲಿಸಿದ್ದರು. ಮತ್ತು ಅಲ್ಲಿನ ಸ್ಥಳೀಯರು ಕಮಲಾ ಹ್ಯಾರಿಸ್ ಅವರೊಂದಿಗಿನ ಮತ್ತು ಕುಟುಂಬದ ಜೊತೆಗಿನ ಸಂಪರ್ಕವನ್ನು ನೆನಪಿಸಿಕೊಂಡಿದ್ದರು. ಕಮಲಾ ಹ್ಯಾರಿಸ್ ಅವರ ಕುಟುಂಬ ಮನ್ನಾರ್ ಗುಡಿಯ ಕುಲಚೇಂದಿರಪುರಂನ ಅಯ್ಯನಾರು ಸ್ವಾಮಿ ದೇವಸ್ಥಾನಕ್ಕೆ ದೇಣಿಗೆ ನೀಡುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಅವರು ಅಗ್ರದೇಶದ ಉಪಾಧ್ಯಕ್ಷರಾದಾಗ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಷೇಕ, ವಿಶೇಷ ಪೂಜೆಗಳು ನಡೆದಿದ್ದವು.

ಟ್ರಂಪ್ ಎದೆಯಲ್ಲಿ ನಡುಕ

ಬಿಡೆನ್ ಬದಲಿಗೆ ಕಮಲಾ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣದಲ್ಲಿ ನಿಲ್ಲುತ್ತಾರೆ ಎಂಬ ಊಹಾಪೋಹದಿಂದ ಟ್ರಂಪ್ ಅವರಿಗೆ ನಡುಕ ಶುರುವಾಗಿದೆ.  ವಲಸಿಗರಿಗೆ ಹುಟ್ಟಿದವಳು ಆಕೆ.  ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ಅರ್ಹತೆ ಇಲ್ಲ ಎಂದು ಟ್ರಂಪ್ ಈ ಹಿಂದೆ ಟೀಕಿಸಿದ್ದರು.
ಕಮಲಾ ಹ್ಯಾರಿಸ್ ವಿರುದ್ಧ ಟ್ರಂಪ್ ಈ ಬಾರಿ ಟೀಕೆ ಹೆಚ್ಚಿಸುವ ಸಾಧ್ಯತೆ ಇದೆ. ಆದಾಗ್ಯೂ, ಅವರ ಹಕ್ಕನ್ನು ಅಮೆರಿಕದ ನ್ಯಾಯಶಾಸ್ತ್ರಜ್ಞರು ಮತ್ತು ಡೆಮೋಕ್ರಾಟ್‌ಗಳು ತಳ್ಳಿಹಾಕಿದ್ದರು. ಯುನೈಟೆಡ್ ಸ್ಟೇಟ್ಸ್‌ನ ಸಂವಿಧಾನದ ಪ್ರಕಾರ, ಅಧ್ಯಕ್ಷ ಮತ್ತು ಉಪಾಧ್ಯಕ್ಷ ಹುದ್ದೆಯನ್ನು ಹೊಂದಿರುವ ವ್ಯಕ್ತಿಗಳು 1787 ರ ನಂತರ ಯುನೈಟೆಡ್ ಸ್ಟೇಟ್ಸ್ ನಲ್ಲಿ ಜನಿಸಿದ ನೈಸರ್ಗಿಕ ನಾಗರಿಕರಾಗಿರಬೇಕು. ಕಮಲಾ ಹ್ಯಾರಿಸ್ ಅಕ್ಟೋಬರ್ 20, 1964 ರಂದು ಕ್ಯಾಲಿಫೋರ್ನಿಯಾದ ಓಕ್ಲ್ಯಾಂಡ್‌ನಲ್ಲಿ ಜನಿಸಿದರು.
ಹಾಗಾಗಿ ಅವರು ಸ್ಪರ್ಧೆಗೆ ಅರ್ಹರು. ಈ ಬಗ್ಗೆ ಯಾವುದೇ ಚರ್ಚೆ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಬಗ್ಗೆ ಟ್ರಂಪ್ ಅದೇ ರೀತಿ ಪ್ರಚಾರ ಮಾಡುತ್ತಿದ್ದರು ಎಂದು ಡೆಮೋಕ್ರಾಟ್‌ಗಳು ಹೇಳುತ್ತಾರೆ.

ಡೊನಾಲ್ಡ್ ಟ್ರಂಪ್ Vs ಕಮಲಾ ಹ್ಯಾರಿಸ್

ಹೊಸದಾಗಿ ಬಿಡುಗಡೆಯಾದ ವೀಡಿಯೊದಲ್ಲಿ, ಕಮಲಾ ಹ್ಯಾರಿಸ್ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಡೊನಾಲ್ಡ್ ಟ್ರಂಪ್ ಅವರು ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರ ಉಮೇದುವಾರಿಕೆಯ ಬಗ್ಗೆ ಎಷ್ಟು ಚಿಂತೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಕಮಲಾ ಅಧ್ಯಕ್ಷೀಯ ರೇಸ್ ನಲ್ಲಿ ನಿಂತರೆ, ಅಮೆರಿಕದ ಮಹಿಳೆಯರೊಂದಿಗೆ ಇಂಡೋ-ಆಫ್ರೋ-ಅಮೆರಿಕನ್ನರು ಅವರತ್ತ ವಾಲುತ್ತಾರೆ ಎಂಬ ಆತಂಕ ಟ್ರಂಪ್ ಬಣದಲ್ಲಿದೆ. ಕಮಲಾ ಉಮೇದುವಾರಿಕೆ ಅಂತಿಮವಾದರೆ ನಿನ್ನೆಯವರೆಗೂ ಒಂದು ಲೆಕ್ಕಾಚಾರ. ಮತ್ತೊಂದು ಲೆಕ್ಕಾಚಾರ ಎಂಬಂತೆ ಫಲಿತಾಂಶ ಬದಲಾಗಲಿದೆ. ಕಮಲಾ ಹ್ಯಾರಿಸ್ ಗೆ ಭಾರತೀಯ ಮೂಲವಿದೆ. ಏಷ್ಯನ್ನರು ಅವರ ಉಮೇದುವಾರಿಕೆಯನ್ನು ಬೆಂಬಲಿಸುವುದರಿಂದ ಟ್ರಂಪ್ ನಿದ್ದೆಗೆಡಿಸಿದೆ.

ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಿಗೆ ಮನವಿ ಮಾಡಿದರೆ ಗೆಲುವು ಸುಲಭ ಎಂಬುದು ಎರಡೂ ಪ್ರಮುಖ ಪಕ್ಷಗಳ ನಂಬಿಕೆ. ಅಮೆರಿಕದ ಅರಿಜೋನಾ, ಫ್ಲೋರಿಡಾ, ಜಾರ್ಜಿಯಾ, ಮಿಚಿಗನ್, ಉತ್ತರ ಕೆರೊಲಿನಾ, ಪೆನ್ಸಿಲ್ವೇನಿಯಾ, ಟೆಕ್ಸಾಸ್ ಮತ್ತು ವಿಸ್ಕಾನ್ಸಿನ್ ರಾಜ್ಯಗಳಲ್ಲಿ ಸುಮಾರು 13 ಲಕ್ಷ ಭಾರತೀಯ ಮತದಾರರಿದ್ದಾರೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಅವರೇ ನಿರ್ಣಾಯಕರು. ಅಮೇರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತೀಯ ಕಮಲ ಅರಳಲಿ ಎಂದು ಎಲ್ಲರೂ ಹಾರೈಸೋಣ.

Advertisement
Tags :
bengaluruchitradurgaIndianKamala Harrissuddionesuddione newsUS presidencyಅಧ್ಯಕ್ಷ ಸ್ಥಾನಅಮೇರಿಕಾಕಮಲಾ ಹ್ಯಾರಿಸ್ಚಿತ್ರದುರ್ಗಬೆಂಗಳೂರುಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article