ಕಾಂಗ್ರೆಸ್ ವಿರುದ್ಧ ಜೆಡಿಎಸ್, ಬಿಜೆಪಿ ವಾಗ್ದಾಳಿ: ಸಿಎಂ-ಡಿಸಿಎಂ ಪರ ನಿಲ್ಲಲು ಶಾಸಕರು, ಸಚಿವರಿಗೆ ಹೈಕಮಾಂಡ್ ಸೂಚನೆ
ಬೆಂಗಳೂರು: ಲೋಕಸಭಾ ಚುನಾವಣೆಗೆ ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ನಡೆಯುತ್ತಿದೆ. ಕಾಂಗ್ರೆಸ್ ಸೋಲಿಸಲು ಜೆಡಿಎಸ್ ಹಾಗೂ ಬಿಜೆಪಿ ಒಂದಾಗಿವೆ. ಹೀಗಾಗಿಯೇ ಕಾಂಗ್ರೆಸ್ ಮೇಲೆ ಯಾವಾಗಲೂ ಜೆಡಿಎಸ್ ಹಾಗೂ ಬಿಜೆಪಿ ನಾಯಕರು ವಾಗ್ದಾಳಿ ನಡೆಸುತ್ತಿದ್ದಾರೆ. ಈ ಸಂಬಂಧ ಶಾಸಕರು ಹಾಗೂ ಸಚಿವರಿಗೆ ಹೈಕಮಾಂಡ್ ಒಂದು ಸೂಚನೆ ನೀಡಿದೆ.
ವಿಪಕ್ಷಗಳ ಆರೋಪಕ್ಕೆ ಆಡಳಿತ ಪಕ್ಷ ತಿರುಗೇಟು ನೀಡುವುದರಲ್ಲಿ ಎಡವುತ್ತಿದೆ. ಇದೇ ವಿಚಾರಕ್ಕೆ ಹೈಕಮಾಂಡ್ ನಾಯಕರು ಗರಂ ಆಗಿದ್ದಾರೆ. ಸಿಎಂ ಹಾಗೂ ಡಿಸಿಎಂ ಬೆಂಬಲಕ್ಕೆ ಯಾಕೆ ಯಾರು ಬರುತ್ತಿಲ್ಲವೆಂದು ಪ್ರಶ್ನಿಸಿದೆ. ಸಿಎಂ - ಡಿಸಿಎಂ ಬೆಂಬಲಕ್ಕೆ ಸಚಿವರು, ಶಾಸಕರು ಯಾಕೆ ಮುಂದೆ ಬರುತ್ತಿಲ್ಲ. ವಿವಾದ - ಗೊಂದಲಗಳ ಸಂದರ್ಭದಲ್ಲಿ ಶಾಸಕರು, ಸಚಿವರು, ಸಿಎಂ ಹಾಗೂ ಡಿಸಿಎಂ ಬೆಂಬಲಕ್ಕೆ ನಿಲ್ಲುತ್ತಿಲ್ಲ. ಶಾಸಕರು ಕೂಡ ವಿರೋಧ ಪಕ್ಷಗಳ ತಂತ್ರಗಾರಿಕೆಗೆ ಕೌಂಟರ್ ಕೊಡುವ ಕೆಲಸ ಮಾಡಬೇಕು. ಕೇವಲ ಸಿಎಂ ಹಾಗೂ ಡಿಸಿಎಂ ಮಾತ್ರ ಸರ್ಕಾರದ ಸಮರ್ಥನೆ ಮಾಡಿಕೊಂಡರೆ ಸಾಲದು ಎಂದಿದ್ದಾರೆ.
ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯಗಳ ಬಗ್ಗೆ ಶಾಸಕರೇ ಜನರ ಮುಂದಿಡಬೇಕು. ಹಾಗೇ ಸರ್ಕಾರದ ಕೆಲಸಗಳ ಬಗ್ಗೆಯೂ ಜನರಿಗೆ ತಲುಪಿಸಬೇಕು. ವಿಪಕ್ಷಗಳು ಅಟ್ಯಾಕ್ ಮಾಡುವಾಗ ಶಾಸಕರೇ ಸರ್ಕಾರದ ಸಿಎಂ - ಡಿಸಿಎಂ ಬೆಂಬಲಕ್ಕೆ ಬರಬೇಕು. ಕೇಂದ್ರ ಸರ್ಕಾರದ ವೈಫಲ್ಯಗಳ ಬಗ್ಗೆ ಅಧ್ಯಯನ ಮಾಡಿ ಎಂದು ಹೈಕಮಾಂಡ್ ರಾಜ್ಯದ ಸಚಿವರು, ಶಾಸಕರಿಗೆ ಸೂಚನೆ ನೀಡಿದೆ. ಇನ್ಮುಂದೆ ಸಿಎಂ ಹಾಗೂ ಡಿಸಿಎಂ ಜೊತೆಗೆ ವಿಪಕ್ಷಗಳನ್ನು ಎದುರಿಸಲು ಸಚಿವರು, ಶಾಸಕರು ಕೂಡ ಸಜ್ಜಾಗಲಿದ್ದಾರೆ.