Homeಪ್ರಮುಖ ಸುದ್ದಿರಾಷ್ಟ್ರೀಯ ಸುದ್ದಿಸಿನಿ ಸುದ್ದಿಕ್ರೀಡಾ ಸುದ್ದಿಆರೋಗ್ಯರಾಜ್ಯ ಸುದ್ದಿ

ಲೆಬನಾನ್ ಮೇಲೆ ಇಸ್ರೇಲ್ ಭೀಕರ ವೈಮಾನಿಕ ದಾಳಿ : 500 ಕ್ಕೂ ಹೆಚ್ಚು ಮಂದಿ ಮೃತ...!

10:21 AM Sep 24, 2024 IST | suddionenews
Advertisement

 

Advertisement

ಸುದ್ದಿಒನ್ : ಇದುವರೆಗೆ ಗಾಜಾಕ್ಕೆ ಸೀಮಿತವಾಗಿದ್ದ ಇಸ್ರೇಲ್ ದಾಳಿ ಈಗ ಲೆಬನಾನ್‌ಗೆ ಸ್ಥಳಾಂತರಗೊಂಡಿದೆ. ಕಳೆದ ವಾರದಲ್ಲಿ ಪೇಜರ್‌ಗಳು, ವಾಕಿ-ಟಾಕಿಗಳ ಸ್ಫೋಟ ಮತ್ತು ಹಿಜ್ಬುಲ್ಲಾ ಕಮಾಂಡರ್‌ಗಳ ಸಾವಿನೊಂದಿಗೆ ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆಯು ತಾರಕಕ್ಕೇರಿದೆ. ದಕ್ಷಿಣ ಲೆಬನಾನ್‌ ಮೇಲೆ ಸೋಮವಾರ ಇಸ್ರೇಲ್ ಭೀಕರ ವೈಮಾನಿಕ ದಾಳಿಯೊಂದಿಗೆ ಮುಗಿ ಬಿದ್ದಿದೆ.

Advertisement

ಬೇಕಾ ಕಣಿವೆಯ ಉದ್ದಕ್ಕೂ ಸೈದಾ, ಮರಜುಯಾನ್, ಟೈರ್ ಮತ್ತು ಜಹರಾನಿ ಜಿಲ್ಲೆಗಳ ಮೇಲೆ ಬಾಂಬ್‍ಗಳ ಸುರಿ ಮಳೆಗೈದಿದೆ. ಈ ದಾಳಿಗಳಲ್ಲಿ ನೂರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ ಮತ್ತು ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಈ ದಾಳಿಯಲ್ಲಿ, 24 ಮಂದಿ ಮಕ್ಕಳು, 31 ಮಂದಿ ಮಹಿಳೆಯರು ಸೇರಿದಂತೆ ಸುಮಾರು 500 ಜನರು ಸಾವನ್ನಪ್ಪಿದ್ದಾರೆ. 1,246 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್‌ನ ಆರೋಗ್ಯ ಸಚಿವ ಫಿರಾಸ್ ಅಬಿಯಾಡ್ ಹೇಳಿದ್ದಾರೆ. ಕಳೆದ ಮಂಗಳವಾರದಿಂದ ಇಸ್ರೇಲ್ ನಡೆಸಿದ ವಿವಿಧ ದಾಳಿಗಳಲ್ಲಿ 5 ಸಾವಿರ ಜನರು ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು.

ಇಸ್ರೇಲ್ ಯುದ್ಧವಿಮಾನಗಳು ಮತ್ತು ಡ್ರೋನ್‌ಗಳೊಂದಿಗೆ ಬಾಂಬ್‌ಗಳ ಸುರಿ ಮಳೆಗರೆಯುತ್ತಿದ್ದಂತೆ ದಕ್ಷಿಣ ಲೆಬನಾನ್‌ನ ಹಳ್ಳಿಗಳು ನಲುಗಿಹೋದವು. ಸಾವಿರಾರು ಜನರು ತಮ್ಮ ಪ್ರಾಣವನ್ನು ಕೈಯಲ್ಲಿ ಹಿಡಿದು ರಾಜಧಾನಿ ಬೈರುತ್ ಕಡೆಗೆ ಓಡುತ್ತಿದ್ದಾರೆ. ರಾಜಧಾನಿಗೆ ತೆರಳುವ ಎಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಕಳೆದ 24 ಗಂಟೆಗಳಲ್ಲಿ, ಬೈರುತ್ ಸೇರಿದಂತೆ ಲೆಬನಾನ್‌ನ ಪೂರ್ವ ಮತ್ತು ದಕ್ಷಿಣ ಭಾಗಗಳಲ್ಲಿ ಹಿಜ್ಬುಲ್ಲಾ ಭಯೋತ್ಪಾದಕರಿಗೆ ಸೇರಿದ ಸುಮಾರು 1,300 ಅಡಗುತಾಣಗಳ ಮೇಲೆ ದಾಳಿ ಮಾಡಿದೆ ಎಂದು ಇಸ್ರೇಲಿ ಸೇನೆ ಘೋಷಿಸಿದೆ. ಈ ದಾಳಿಗಳು ಕ್ಷಿಪಣಿಗಳು ಸೇರಿದಂತೆ ಅವರ ಶಸ್ತ್ರಾಸ್ತ್ರಗಳನ್ನು ನಿಷ್ಕ್ರಿಯಗೊಳಿಸುವ ಗುರಿಯನ್ನು ಹೊಂದಿವೆ ಎಂದು ಅದು ಹೇಳಿದೆ. ದಕ್ಷಿಣ ಪ್ರದೇಶವೊಂದರಲ್ಲೇ 800 ಅಡಗು ತಾಣಗಳಿವೆ ಎಂದು ತಿಳಿದುಬಂದಿದೆ.

ಕಳೆದ ಎರಡು ದಶಕಗಳಲ್ಲಿ ಹಿಜ್ಬುಲ್ಲಾ ನಿರ್ಮಿಸಿದ ಸೇನಾ ಮೂಲಸೌಕರ್ಯ ಹೊಂದಿರುವ ತಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲ್‌ನ ಸೇನಾ ಮುಖ್ಯಸ್ಥ ಹರ್ಜೆ ಹಲೇವಿ ಹೇಳಿದ್ದಾರೆ. ಹಿಜ್ಬುಲ್ಲಾದ ಪ್ರಮುಖ ನೆಲೆಗಳಲ್ಲಿ ಒಂದಾದ ಅಲಿ ಕರ್ಕೆ ಮೇಲಿನ ದಾಳಿಯಲ್ಲಿ ಸಂಘಟನೆಯ ಪ್ರಮುಖ ಕಮಾಂಡೋಗಳು ಸಾವನ್ನಪ್ಪಿದ್ದಾರೆ ಎಂದು ವಿಶ್ವಾಸಾರ್ಹ ಮೂಲಗಳು ತಿಳಿಸಿವೆ. ಈ ಹಿಂದೆ ಇಸ್ರೇಲ್ ಮತ್ತು ಹಿಜ್ಬುಲ್ಲಾ ನಡುವಿನ ಯುದ್ಧವು 34 ದಿನಗಳವರೆಗೆ ನಡೆದಿತ್ತು. 2006ರ ನಂತರ ಇವರಿಬ್ಬರ ನಡುವೆ ನಡೆದ ದೊಡ್ಡ ಸಂಘರ್ಷ ಇದಾಗಿದೆ ಎಂಬುದು ಗಮನಾರ್ಹ. ಮತ್ತೊಂದೆಡೆ, ಎರಡು ಇಸ್ರೇಲಿ ಸೇನಾ ನೆಲೆಗಳು ಸೇರಿದಂತೆ ಐದು ಸ್ಥಾವರಗಳ ಮೇಲೆ 125 ರಾಕೆಟ್‌ಗಳನ್ನು ಹಾರಿಸಿರುವುದಾಗಿ ಹೆಜ್ಬೊಲ್ಲಾ ಘೋಷಿಸಿತು.

ಲೆಬನಾನ್ ಮೇಲಿನ ಈ ಸರಣಿ ದಾಳಿ ನಿಲ್ಲುವುದಿಲ್ಲ. ಅವರು ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿದ್ದ ಬೇಕಾ ಕಣಿವೆಯನ್ನು ನಾಶಮಾಡುವುದಾಗಿ ಇಸ್ರೇಲ್ ಸ್ಪಷ್ಟಪಡಿಸಿದೆ. ಇಸ್ರೇಲ್‌ನ ಸೇನಾ ವಕ್ತಾರ, ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ, ಕಣಿವೆಯಲ್ಲಿರುವ ನಾಗರಿಕರು ಶಸ್ತ್ರಾಸ್ತ್ರಗಳನ್ನು ಬಚ್ಚಿಟ್ಟಿರುವ ಮನೆಗಳನ್ನು ತಕ್ಷಣವೇ ತೊರೆಯಬೇಕು ಎಂದು ಹೇಳಿದ್ದಾರೆ. ಲೆಬನಾನಿನ ನಾಗರಿಕರು ಈ ಎಚ್ಚರಿಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲ್‌ನೊಂದಿಗಿನ ಯುದ್ಧವು ಮತ್ತೊಂದು ಹಂತವನ್ನು ತಲುಪಿದೆ ಮತ್ತು ಎಲ್ಲಾ ಮಿಲಿಟರಿ ಸಾಧ್ಯತೆಗಳಿಗೆ ಸಿದ್ಧವಾಗಿದೆ ಎಂದು ಹಿಜ್ಬುಲ್ಲಾದ ಮುಖ್ಯಸ್ಥ ನಯಿಮ್ ಕಸ್ಸೆಮ್ ಹೇಳಿದ್ದಾರೆ. ಇರಾನ್‌ನ ರೆವಲ್ಯೂಷನರಿ ಗಾರ್ಡ್‌ಗಳ ಸಹಾಯದಿಂದ ಈ ಬೇಕಾ ಕಣಿವೆಯಲ್ಲಿ 1982 ರಲ್ಲಿ ಹಿಜ್ಬುಲ್ಲಾ ಹೊರಹೊಮ್ಮಿತು. ಕಳೆದ ವರ್ಷ ಅಕ್ಟೋಬರ್ 7 ರಂದು ಹಮಾಸ್ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಇಸ್ರೇಲ್ ಗಾಜಾದ ಮೇಲೆ ತನ್ನ ಉಗ್ರ ದಾಳಿಯನ್ನು ಮುಂದುವರೆಸಿದೆ. ಹಿಜ್ಬುಲ್ಲಾ ಮತ್ತು ಹೌತಿಗಳು ಹಮಾಸ್‌ಗೆ ಬೆಂಬಲವಾಗಿ ಇಸ್ರೇಲ್ ಅನ್ನು ಗುರಿಯಾಗಿಸಿಕೊಂಡಿದ್ದಾರೆ.

Advertisement
Tags :
bengaluruchitradurgadeadisraelLebanonsuddionesuddione newsterrible air attackಇಸ್ರೇಲ್‌ಚಿತ್ರದುರ್ಗಬೆಂಗಳೂರುಭೀಕರ ವೈಮಾನಿಕ ದಾಳಿಮೃತಲೆಬನಾನ್ಸುದ್ದಿಒನ್ಸುದ್ದಿಒನ್ ನ್ಯೂಸ್
Advertisement
Next Article