For the best experience, open
https://m.suddione.com
on your mobile browser.
Advertisement

ಉದ್ಯೋಗ ಮೇಳಗಳನ್ನು ಆಯೋಜನೆ ಯುವಜನರ ಮೇಲಿನ ಕಾಳಜಿಯೇ? ರೊಚ್ಚಿಗೆದ್ದಿರುವ ನಿರುದ್ಯೋಗಿ ಯುವಜನರ ಆಕ್ರೋಶವೇ? : ಸಿದ್ದರಾಮಯ್ಯ ಪ್ರಶ್ನೆ

03:48 PM Feb 13, 2024 IST | suddionenews
ಉದ್ಯೋಗ ಮೇಳಗಳನ್ನು ಆಯೋಜನೆ ಯುವಜನರ ಮೇಲಿನ ಕಾಳಜಿಯೇ  ರೊಚ್ಚಿಗೆದ್ದಿರುವ ನಿರುದ್ಯೋಗಿ ಯುವಜನರ ಆಕ್ರೋಶವೇ    ಸಿದ್ದರಾಮಯ್ಯ ಪ್ರಶ್ನೆ
Advertisement

Advertisement
Advertisement

2014ರಲ್ಲಿ ಕೋಟಿಗಳ ಲೆಕ್ಕದಲ್ಲಿ ಉದ್ಯೋಗ ನೀಡುವ ಭರವಸೆ ನೀಡಿ ಹತ್ತು ವರ್ಷಗಳ ನಂತರ ಲಕ್ಷಗಳ ಲೆಕ್ಕದಲ್ಲಿ ಉದ್ಯೋಗ ನೀಡಿದ್ದನ್ನು ಸಾಧನೆ ಎಂದು ಬಿಂಬಿಸುತ್ತಿರುವುದು ತಮಾಷೆಯಾಗಿ ಕಾಣುತ್ತಿಲ್ಲವೇ? ಎಲ್ಲಿಯ 20 ಕೋಟಿ ಉದ್ಯೋಗಗಳು? ಎಲ್ಲಿಯ ರೋಜಗಾರ್ ಮೇಳದ ಲಕ್ಷಗಳ ಲೆಕ್ಕದ ಉದ್ಯೋಗಗಳು? ನಿಜ ಹೇಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ನೀವು ಸೃಷ್ಟಿಸಿರುವ ಉದ್ಯೋಗಗಳ ಸಂಖ್ಯೆ ಎಷ್ಟು? ಎಂದು ಕೇಂದ್ರ ಸರ್ಕಾರಕ್ಕೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

Advertisement
Advertisement

ನರೇಂದ್ರ ಮೋದಿಯವರೇ, ನಿಮ್ಮದೇ ಬಿಜೆಪಿ ಸರ್ಕಾರದ ಸಚಿವ ಸಂಪುಟದ ಜಿತೇಂದರ್ ಸಿಂಗ್ ಅವರು 2022ರ ಜುಲೈ ನಲ್ಲಿ ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ “ 2014-15 ಮತ್ತು 2021 -22ರ ಅವಧಿಯ ನಡುವೆ ಕೇವಲ 7 ಲಕ್ಷ ಹೊಸ ಉದ್ಯೋಗಗಳು ಮಾತ್ರ ಸೃಷ್ಟಿಯಾಗಿತ್ತು ಎಂದು ಹೇಳಿದ್ದರು. ಅಂತಿಮ ಸತ್ಯ ಇದೇ ಇರಬಹುದಾ?

ಇದು ಹೊಸ ಉದ್ಯೋಗಗಳ ಸೃಷ್ಟಿಯ ಕಥೆಯಾದರೆ, ಇರುವ ಸರ್ಕಾರಿ ಉದ್ಯೋಗಗಳ ಭರ್ತಿಯಲ್ಲೂ ತೀರಾ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ಬಿಜೆಪಿ ಆಡಳಿತದಲ್ಲಿ ವಿವಿಧ ಇಲಾಖೆಯ 9.79 ಲಕ್ಷ ಹುದ್ದೆಗಳು ಖಾಲಿ ಇವೆ. ಸಣ್ಣಪುಟ್ಟ ಹುದ್ದೆಗಳಿಗೂ ಸ್ನಾತಕೋತ್ತರ ಪದವೀಧರ, ಬಿಇ, ಎಂಬಿಬಿಎಸ್ ಪದವಿ ಪಡೆದವರು ಅರ್ಜಿ ಸಲ್ಲಿಸುವ ವಿದ್ಯಮಾನ ಇತ್ತೀಚೆಗೆ ಸಾಮಾನ್ಯವಾಗುತ್ತಿದೆ. ದೇಶದ ಯುವಜನರು ನಿರುದ್ಯೋಗದ ದಳ್ಳುರಿಯಲ್ಲಿ ಬೇಯ್ತಾ ಇದ್ದಾರೆ. ಕಳೆದ ವರ್ಷಾಂತ್ಯದಲ್ಲಿ ಸಂಸತ್ತಿನ ಭದ್ರತೆಯನ್ನು ಬೇಧಿಸಿ, ಒಳನುಸುಳಿ ಹೊಗೆಬಾಂಬ್ ಸಿಡಿಸುವ ಮಟ್ಟಿಗೆ ಹತಾಶರಾಗಿದ್ದ ಯುವಕರು ಕೂಡಾ ನಿರುದ್ಯೋಗಕ್ಕೆ ಬಲಿಯಾದವರಲ್ಲವೇ ನರೇಂದ್ರ ಮೋದಿ ಅವರೇ?

ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಉದ್ಯೋಗ ಭರ್ತಿಗಾಗಿ ಸರ್ಕಾರಗಳು ನಿರ್ದಿಷ್ಟ ನೇಮಕಾತಿ ಪ್ರಕ್ರಿಯೆ ನಡೆಸುತ್ತವೆ. ಇದಕ್ಕಾಗಿಯೇ ಯುಪಿಎಸ್‌ಸಿ, ಎಸ್ಎಸ್‌ಸಿ, ಲೋಕಸೇವಾ ಆಯೋಗಗಳಗಳಿವೆ. ಹೀಗಿರುವಾಗ ಸಾಕ್ಷಾತ್ ಪ್ರಧಾನಿಯವರೇ ವೀಡಿಯೋ ಕಾನ್ಫರೆನ್ಸ್ ಮೂಲಕ ನೇಮಕಾತಿ ಪತ್ರಗಳ ವಿತರಿಸುತ್ತಿರುವುದು ಯಾವ ಉದ್ಯೋಗಗಳಿಗೆ? ರೋಜ್ ಗಾರ್ ಮೇಳದಲ್ಲಿ ನೀಡಲಾಗುತ್ತಿರುವ ಉದ್ಯೋಗಗಳು ಯಾವುದು? ಇವುಗಳು ಖಾಯಂ ಉದ್ಯೋಗವೇ?ತಾತ್ಕಾಲಿಕವೇ? ಅರೆಕಾಲಿಕವೇ? ಪೂರ್ಣಕಾಲಿಕವೇ? ಈ ಉದ್ಯೋಗಗಳನ್ನು ನೀಡುವಾಗ ಮೀಸಲಾತಿಯನ್ನು ಅನುಸರಿಸಲಾಗಿದೆಯೇ? ಅರ್ಹತೆಗಷ್ಟೇ ಪ್ರಾಮುಖ್ಯ ನೀಡಲಾಗಿದೆಯೇ? ರಾಜಕೀಯ ಒಲವು -ನಿಲುವುಗಳನ್ನು ಪರಿಗಣಿಸಲಾಗಿತ್ತೇ? ಪ್ರಧಾನಿಗಳೇ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

2004-2012ರ ಅವಧಿಯಲ್ಲಿ, ಅಂದರೆ ಯುಪಿಎ ಅವಧಿಯಲ್ಲಿ ಪ್ರತಿವರ್ಷ 75 ಲಕ್ಷ ಉದ್ಯೋಗಗಳು ಸೃಷ್ಟಿಯಾಗುತ್ತಿದ್ದವು. ಆದರೆ ಈ ಪ್ರಮಾಣ 2013ರ ನಂತರದಲ್ಲಿ 29 ಲಕ್ಷಕ್ಕೆ ಇಳಿದಿದೆ. ನಿರುದ್ಯೋಗದ ತೀವ್ರತೆ ನಮ್ಮ ದೇಶದಲ್ಲಿ ಎಷ್ಟರಮಟ್ಟಿಗೆ ಇದೆಯೆಂದರೆ, ಎನ್.ಸಿ.ಆರ್.ಬಿ ಪ್ರಕಾರ ಪ್ರತಿ ಗಂಟೆಗೆ ಇಬ್ಬರು ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ! ಕರ್ನಾಟಕವೊಂದರಲ್ಲೇ 2021ರಲ್ಲಿ 1,129 ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರಿಗೆಲ್ಲಿಯ ರೋಜಗಾರ್ ಮೇಳ ನರೇಂದ್ರ ಮೋದಿ ಅವರೇ?

ಉದ್ಯೋಗ ಅರಸಿ, ದೇಶದಿಂದ ವಿದೇಶಕ್ಕೆ ವಲಸೆ ಹೋಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇತ್ತೀಚೆಗೆ ಫ್ರಾನ್ಸ್ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದ ಈ ವಿಮಾನದಲ್ಲಿ 66 ಮಂದಿ ಗುಜರಾತಿಗಳಿದ್ದರು. ತಮ್ಮನ್ನು ಗುಜರಾತಿನಿಂದ ಅಮೆರಿಕಾಗೆ ಅಕ್ರಮವಾಗಿ ಕರೆದೊಯ್ಯಲು ಏಜೆಂಟ್ ಗಳಿಗೆ ತಲಾ 60 - 80 ಲಕ್ಷ ರೂಪಾಯಿಗಳನ್ನು ನೀಡಿದ್ದರು ಎಂಬ ಅಂಶ ವಿಚಾರಣೆಯಲ್ಲಿ ಬಹಿರಂಗವಾಗಿತ್ತು. 2018 ರಿಂದ 2019ರ ವರೆಗೆ 8,027 ಮಂದಿ, 2019 ರಿಂದ 2020ರ ವರೆಗೆ 19,883 ಮಂದಿ, 2020 ರಿಂದ 2021ರ ವರೆಗೆ 30,662 ಮಂದಿ, 2021 ರಿಂದ 2022ರ ವರೆಗೆ 63,927 ಮಂದಿ ಭಾರತೀಯರು ಅಕ್ರಮವಾಗಿ ಅಮೆರಿಕ ಪ್ರವೇಶಿಸಲು ಯತ್ನಿಸಿ ಬಂಧನಕ್ಕೊಳಗಾಗಿದ್ದಾರೆ. ಈ ಅಕ್ರಮ ವಲಸಿಗರ ಪೈಕಿ ಬಹುಪಾಲು ಜನರು ಗುಜರಾತ್ ಮತ್ತು ಪಂಜಾಬ್ ರಾಜ್ಯಗಳಿಗೆ ಸೇರಿದವರು ಎಂಬುದು ಗಮನಿಸಬೇಕಾದ ಅಂಶ ಅಲ್ಲವೇ?. ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳನ್ನು ಗೆಲ್ಲುವ ಆತ್ಮವಿಶ್ವಾಸ ವ್ಯಕ್ತಪಡಿಸುವ ಪ್ರಧಾನಿ @narendramodi ಅವರು ಈಗ ತರಾತುರಿಯಿಂದ ಉದ್ಯೋಗ ಮೇಳಗಳನ್ನು ಆಯೋಜಿಸಲು ಕಾರಣ ಯುವಜನರ ಮೇಲಿನ ಕಾಳಜಿಯೇ? ಇಲ್ಲವೇ ಉದ್ಯೋಗ ಇಲ್ಲದೆ ರೊಚ್ಚಿಗೆದ್ದಿರುವ ನಿರುದ್ಯೋಗಿ ಯುವಜನರ ಆಕ್ರೋಶವೇ? ಎಂದು ಟ್ವೀಟ್ ಮಾಡಿದ್ದಾರೆ.

Advertisement
Tags :
Advertisement