ನೀತಿ ಸಂಹಿತೆ ಜಾರಿಯಲ್ಲಿರುವಾಗಲೇ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ವರ್ಗಾವಣೆ : ಕಾರಣ ಏನು ಗೊತ್ತಾ..?
ಬೆಂಗಳೂರು: ಲೋಕಸಭಾ ಚುನಾವಣೆಯ ದಿನಾಂಕ ಈಗಾಗಲೇ ಘೋಷಣೆಯಾಗಿದೆ. ಈ ಹಿನ್ನೆಲೆ ರಾಜ್ಯದೆಲ್ಲಡೆ ನೀತಿ ಸಂಹಿತೆ ಜಾರಿಯಲ್ಲಿದೆ. ಹೀಗಿರುವಾಗಲೂ ರಾಜ್ಯ ಸರ್ಕಾರ ಐಪಿಎಸ್ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಿದೆ. ಅವರ ಪತ್ನಿ ಅಂಜಲಿ ನಿಂಬಾಳ್ಕರ್ ಲೋಕಸಭಾ ಚುನಾವಣೆಯ ಅಭ್ಯರ್ಥಿಯಾಗಿರುವ ಕಾರಣ, ಅವರನ್ನು ಚುನಾವಣಾ ಆಯೋಗದ ಅನುಮತಿ ಮೇರೆಗೆ ವರ್ಗಾವಣೆಗೊಳಿಸಲಾಗಿದೆ.
ಅಂಜಲಿ ನಿಂಬಾಳ್ಕರ್ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಹೀಗಾಗಿ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿತ್ತು. ಹೇಮಂತ್ ನಿಂಬಾಳ್ಕರ್ ಅವರು ಹೆಚ್ಚು ಪ್ರಭಾವಿ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅಭ್ಯರ್ಥಿಯೊಂದಿಗಿನ ಅವರ ಸಂಬಂಧವೂ ಇತರ ಐಪಿಎಸ್ ಅಧಿಕಾರಿಗಳು ಮತ್ತು ಚುನಾವಣಾ ಕೆಲಸಕ್ಕಾಗಿ ನಿಯೋಜಿಸಿದ ಪೊಲೀಸರ ಮೇಲೆ ಪ್ರಭಾವ ಬೀರಬಹುದು. ಅಲ್ಲದೆ ಹೇಮಂತ್ ನಿಂಬಾಳ್ಕರ್ ತಮ್ಮ ಪತ್ನಿ ಪರ ಮತಯಾಚನೆ ಮಾಡಲು ಕಚೇರಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಇದೇ ಹುದ್ದೆಯಲ್ಲಿ ಮುಂದುವರೆದರೆ ಅವರು ತಮ್ಮ ಪ್ರಭಾವ ಬಳಸಿ ಕಾಂಗ್ರೆಸ್ ಪಕ್ಷವನ್ನು ಹಾಗೂ ಅಭ್ಯರ್ಥಿಗಳ ಪರ ಒಲವು ತೋರುತ್ತಾರೆ. ಹೀಗಾಗಿ ಅವರನ್ನು ಬೇರೆ ರಾಜ್ಯಕ್ಕೆ ವರ್ಗಾವಣೆ ಮಾಡಬೇಕೆಂದು ದೂರು ನೀಡಿದ್ದರು.
ದೂರಿನ ಮೇರೆಗೆ ಚುನಾವಣಾ ಆಯೋಗದ ಸೂಚನೆಯಂತೆ ಈಗ ಹೇಮಂತ್ ನಿಂಬಾಳ್ಕರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ನೀತಿ ಸಂಹಿತೆ ಜಾರಿ ಇರುವ ತನಕ ಈ ಆದೇಶ ಚಾಲ್ತಿಯಲ್ಲಿ ಇರಲಿದೆ. ಇನ್ನು ಹೇಮಂತ್ ನಿಂಬಾಳ್ಕರ್ ಅವರ ಜಾಗಕ್ಕೆ ಸೂರಳ್ಕರ್ ವಿಕಾಸ್ ಕಿಶೋರ್ ನೇಮಕ ಮಾಡಲಾಗಿದೆ. ಬಿಬಿಎಂಪಿ ಆರೋಗ್ಯ ವಿಭಾಗದಲ್ಲಿ ವಿಶೆಷ ಆಯುಕ್ತರಾಗಿದ್ದವರು ಕಿಶೋರ್.